ಕುಂದಾಪುರ :ಓದುಗರಲ್ಲಿ ಕುತೂಹಲ ಉಂಟು ಮಾಡುವ ಕೌಶಲ್ಯ ಕಥೆಗಾರರಲ್ಲಿ ಇರಬೇಕು – ರವಿಕಿರಣ್ ಮುರ್ಡೇಶ್ವರ

0
301

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕಥೆಗಾರರಲ್ಲಿ ಅದ್ಭುತವಾದ ಆಲೋಚನಾ ಶಕ್ತಿ ಇರಬೇಕು. ಓದುಗರ ನಿರೀಕ್ಷೆಯನ್ನೂ ಮೀರಿ ಕಥೆಯ ಮುಕ್ತಾಯವಾಗಬೇಕು. ಕಥೆಯನ್ನು ನಿರೂಪಿಸುತ್ತಾ ಹೋಗುವಾಗ ಜಾಗರೂಕವಾಗಿರಬೇಕು. ಭಾಷೆ, ವ್ಯಾಕರಣದ ಬಗ್ಗೆ ಪ್ರಭುತ್ವ ಇರಬೇಕು. ಕಥೆಯಲ್ಲಿ ಬರುವ ಪಾತ್ರಗಳು, ಅದನ್ನು ಬೆಳೆಸುವಲ್ಲಿ ಕಥೆಗಾರ ಓದುಗರಲ್ಲಿ ಕುತೂಹಲ ಉಂಟು ಮಾಡುವ ಕೌಶಲ್ಯ ಕಥೆಯಲ್ಲಿ ಇರಬೇಕು ಎಂದು ಪ್ರಸಿದ್ಧ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ  ಹೇಳಿದರು.
ಮಾ.೩ರಂದು ಜನಪ್ರತಿನಿಧಿ ಪ್ರಕಾಶನ ಕುಂದಾಪುರ ಮತ್ತು ವೀರಲೋಕ ಪ್ರಕಾಶನ ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ಕುಂದಾಪುರ ರೋಟರಿ ಕುಂದಾಪುರ ಮಿಡ್‌ಟೌನ್ ಸಭಾಂಗಣದಲ್ಲಿ ನಡೆದ ಎರಡು ದಿನಗಳ ದೇಸಿ ಜಗಲಿ ಕಥಾ ಕಮ್ಮಟದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಥೆಯನ್ನು ಅದ್ಬುತವಾಗಿ ಓದುಗರ ಮುಂದಿಡುವಲ್ಲಿ ಕಥೆಗಾರರ ಕೌಶಲ್ಯವೂ ಮುಖ್ಯ. ಓದುಗರ ಆಲೋಚನೆಗೆ ಚುರುಕು ಮುಟ್ಟಿಸುವ, ಚಿಂತನೆಗಳನ್ನು ಹುಟ್ಟು ಹಾಕುವ ಕಥೆಗಳು ಖುಷಿಯ ಜೊತೆ ಮನಸ್ಸಿನಲ್ಲಿ ಪರಾಮರ್ಶೆಗೂ ಅವಕಾಶ ನೀಡುತ್ತದೆ. ಕುತೂಹಲ ಕೆರಳಿಸುವ ಪತ್ತೆದಾರಿ ಕಥೆಗಳ ಅವಶ್ಯಕತೆ ಕನ್ನಡದಲ್ಲಿ ಇದೆ ಎಂದರು.
ಸಮಾರೋಪ ಭಾಷಣ ಮಾಡಿದ ಪಂಚಾಯತ್ ರಾಜ್ ಪರಿಣಿತ ಎಸ್.ಜನಾರ್ದನ್ ಮರವಂತೆ  ಕನ್ನಡದಲ್ಲಿ ಸಾಕಷ್ಟು ಅತ್ಯುತ್ತಮ ಕಥೆಗಳಿವೆ. ಕಥೆಗಾರರು ಓದುವ ಹವ್ಯಾಸವನ್ನು ಬೆಳೆಸಿಕೊಂಡಾಗ ಉತ್ತಮ ಕಥೆಗಳನ್ನು ನೀಡಲು ಸಾಧ್ಯ. ಕಥೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸುವಲ್ಲಿ ಓದು ಸಹಕಾರಿಯಾಗುತ್ತದೆ. ಓದುವಿಕೆ ಇಲ್ಲದಿದ್ದರೆ ಉತ್ತಮ ಕಥೆಗಾರರಾಗಲು ಸಾಧ್ಯವಿಲ್ಲ, ಭಾಷೆಯ ಮೇಲೆ ಹಿಡಿತ ಸಾಧಿಸಲು ಓದುವಿಕೆ ಮುಖ್ಯ ಎಂದು ಹೇಳಿದರು.
ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದ ಖ್ಯಾತ ವ್ಯಂಗ್ಯಚಿತ್ರಕರಾದ ಕೆ.ಜಿ ಹೆಬ್ಬಾರ್, ಕಥೆಗೊಂದು ಚಿತ್ರವಿದ್ದರೆ ಅದು ಇನ್ನಷ್ಟು ಪರಿಣಾಮಕಾರಿಯಾಗಿ ನಿಲ್ಲುತ್ತದೆ. ಕಥೆ ಅಥವಾ ಚಿತ್ರ ರಚನೆಕಾರರಿಂದ ಹೊರಬಂದ ಮೇಲೆ ಅದು ಓದುಗರ ಸ್ವತ್ತು. ಕಥೆಯ ವಸ್ತುವನ್ನು ಆಧರಿಸಿ ಚಿತ್ರವನ್ನು ಕಥೆಯ ಮುಖ್ಯವಾಹಿನಿ ಹತ್ತಿರಕ್ಕೆ ಹೋಗುವ ಪ್ರಯತ್ನ ಮಾಡುತ್ತೇವೆ. ಇವತ್ತು ಸಾಹಿತ್ಯ ಕ್ಷೇತ್ರಕ್ಕೆ ಹೊಸ ಚಿಗುರು ಕಾಣಿಸುತ್ತಿದೆ. ಈ ಆಸಕ್ತಿ ನಿರಂತರತೆಯನ್ನು ಕಾಪಾಡಿಕೊಳ್ಳಬೇಕು. ಬಹುಶಃ ಈಗ ಸಿಗುವಂತಹ ಅವಕಾಶಗಳು, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಸಿಗುವ ವಿಫುಲ ವೇದಿಕೆಗಳು ಹೊಸ ಹೊಸ ಬರಹಗಾರರಿಗೆ ಅನುಕೂಲಕಾರಿಯಾಗಿವೆ. ಇಂಥಹ ಕಥಾಕಮ್ಮಟಗಳ ಸದುಪಯೋಗ ಪಡೆದುಕೊಂಡು ಯಶಸ್ವಿಯಾದ ಕಥೆಗಾರರು ಮುಂದೆ ದೊಡ್ಡ ಕಥೆಗಾರರಾಗಿ ಮಾರ್ಪಟ್ಟಾಗ ತಮಗೆ ಮಾರ್ಗದರ್ಶನ ಮಾಡಿದ ಸಂಸ್ಥೆಗಳ ಮರೆಯಬಾರದು ಎಂದರು.

Click Here

ಹಿರಿಯ ಲೇಖಕಿ, ಅನುವಾದಕಿ ಡಾ.ಪಾರ್ವತಿ ಜಿ.ಐತಾಳ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿರಿಯ ಲೇಖಕಿ ಡಾ.ಪಾರ್ವತಿ ಜಿ ಐತಾಳ್ ಅವರ ಕನ್ನಡದ ಮೂಲಕ ಇಂಗ್ಲೀಷ್ ಕಲಿಯಿರಿ ಪುಸ್ತಕವನ್ನು ಎಸ್.ಜನಾರ್ದನ್ ಮರವಂತೆ ಬಿಡುಗಡೆಗೊಳಿಸಿದರು.
ಜನಪ್ರತಿನಿಧಿ ಪ್ರಕಾಶನದ ಮುಖ್ಯಸ್ಥರಾದ ಸುಬ್ರಹ್ಮಣ್ಯ ಪಡುಕೋಣೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಶಿಬಿರಾರ್ಥಿಗಳಾದ ಶರತ್ ವಂಡ್ಸೆ,  ವರುಣ್, ಸುಮನಾ ಆರ್ ಹೇರ್ಳೆ ಅನಿಸಿಕೆ ಹಂಚಿಕೊಂಡರು. ನಾಗರಾಜ್ ವಂಡ್ಸೆ, ಸುರಕ್ಷಾ ಉಡುಪ, ಕೀರ್ತನ್ ಪಡುಕೋಣೆ ಅತಿಥಿಗಳ ಪರಿಚಯಿಸಿದರು. ವಿನಯ ಕೌಂಜೂರು ಕಾರ್ಯಕ್ರಮ ನಿರ್ವಹಿಸಿದರು. ಸುಮನಾ ಪಡುಕೋಣೆ ವಂದಿಸಿದರು. ಶ್ರೀರಾಜ್ ವಕ್ವಾಡಿ ಕಾರ್ಯಕ್ರಮದ ರೂಪುರೇಷೆ ಸಂಯೋಜಿಸಿದ್ದರು. ಕೃಷ್ಣ, ರೂಪೇಶ್, ರಕ್ಷಿತ್ ಕೋಟೇಶ್ವರ, ಗಣೇಶ ಬಳ್ಕೂರು, ಮಧುಸೂದನ್ ಕಾರ್ಯಕ್ರಮಕ್ಕೆ ಸಹಕರಿಸಿದರು. ಎರಡು ದಿನಗಳ ಕಾಲ ನಡೆದ ಕಥಾ ಕಮ್ಮಟದಲ್ಲಿ ೪೦ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು.
Click Here

LEAVE A REPLY

Please enter your comment!
Please enter your name here