ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ನನ್ನ ಹೆಂಡತಿಗೂ ಒಂದೇ ಒಂದು ಅವಕಾಶ ಕೊಡಿ, ಸಂಸದೆಯಾಗಿ ಅವರು ಉತ್ತಮ ಕ್ಷೇತ್ರದ ಜನರ ಪರವಾಗಿ ಕೆಲಸ ಮಾಡುತ್ತಾಳೆ ಎಂದು ನಾನು ಗ್ಯಾರಂಟಿ ಕೊಡುತ್ತೇನೆ. ಜನಸೇವೆ ಮಾಡುವ ಇಚ್ಛೆ ಗೀತಾ ಅವರಲ್ಲಿದೆ. ಕ್ಷೇತ್ರದ ಜನತೆಯ ಧ್ವನಿಯಾಗಿ, ಮುಖ್ಯಸ್ಥೆಯಾಗಿ ನಿಂತು ಕೆಲಸ ಮಾಡಲು ಹೊರಟಿರುವ ಅವರ ಮನಸ್ಸಿಗೆ ಆಶೀರ್ವಾದ ಮಾಡಿ, ಎಂದು ನಟ, ಹ್ಯಾಟ್ರೀಕ್ ಹೀರೋ ಶಿವರಾಜ ಕುಮಾರ್ ಹೇಳಿದರು.
ವಂಡ್ಸೆಯ ಶ್ರಿಯಾ ಕನ್ವನ್‍ಷನ್ ಹಾಲ್‍ನಲ್ಲಿ ನಡೆದ ಇಡೂರು ಕುಂಜ್ಞಾಡಿ ಗ್ರಾಮ, ಚಿತ್ತೂರು ಗ್ರಾಮ, ವಂಡ್ಸೆ ಗ್ರಾಮದ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ ಕುಮಾರ್ ಮಾತನಾಡಿ, ಈ ಹಿಂದೆ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರು ಜನರ ಪರವಾಗಿ ನೀಡಿದ ಕೆಲಸಕಾರ್ಯಗಳು ಇಂದು ಜನರ ಮುಂದಿದೆ. ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್, ಗ್ರಾಮೀಣ ಕೃಪಾಂಕ, ಆಶ್ರಯ ಹೀಗೆ ಈ ಯೋಜನೆಗಳು ಇಂದಿಗೂ ಜನರ ಮನಸಿನಲ್ಲಿದೆ. ಬಂಗಾರಪ್ಪನವರ ಮಗಳಾಗಿ ನಾನು ಕೂಡಾ ಜನರ ಸೇವೆ ಮಾಡಲು ಅವಕಾಶ ಮಾಡಿಕೊಡಿ, ಬೈಂದೂರು ಕ್ಷೇತ್ರದಲ್ಲಿನ ಕುಡಿಯುವ ನೀರಿನ ಸಮಸ್ಯೆ, ಜೆಜೆಎಂ, ಪ್ರವಾಸೋದ್ಯಮ ಅಭಿವೃದ್ದಿಗೆ ಒತ್ತು ನೀಡಿ ಹೆಚ್ಚಿನ ಅನುದಾನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ಹಿಂದುಳಿದ ವರ್ಗದವರನ್ನು ಬೆಳೆಯಲು ಬಿಜೆಪಿಯಲ್ಲಿ ಸಾಧ್ಯವಿಲ್ಲ. ಪ್ರಮೋದ್ ಮದ್ವರಾಜ ಅವರನ್ನು ಮನೆಗೆ ಕಳಿಸಿದರು, ಹಿಂದುತ್ವಕ್ಕಾಗಿ ನಿರಂತರ ಹೋರಾಟ ಮಾಡಿಕೊಂಡು ಬಂದ ಸತ್ಯಜಿತ್ ಸುರತ್ಕಲ್‍ಗೆ ಅವಕಾಶ ನೀಡಲಿಲ್ಲ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಮತ್ತು ವಿನಯ ಕುಮಾರ್ ಸೊರಕೆ ಸೋಲಿಸಲು ಕೋಟ ಶ್ರೀನಿವಾಸ ಪೂಜಾರಿ ಅವರ ಮೂಲಕ ಹೊಸ ಹೊ ಸ ಅಸ್ತ್ರ ಪ್ರಯೋಗಿಸಿದರು. ಈ ಚುನಾವಣೆಯಲ್ಲಿ ಮತದಾರರು ಬಿಜೆಪಿಯ ಮಾತುಗಳಿಗೆ ಮರುಳಾಗದೆ ರಾಘವೇಂದ್ರ ಅವರನ್ನು ವಾಪಸ್ಸು ಕಳಿಸಬೇಕು, ಗೀತಾ ಶಿವರಾಜ್ ಕುಮಾರ್ ಅವರನ್ನು ಗೆಲ್ಲಿಸಬೇಕು ಎಂದರು.
ಮಾಜಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಮಾತನಾಡಿ, ಈ ರಾಜ್ಯಕ್ಕೆ ಎಸ್.ಬಂಗಾರಪ್ಪ ಅವರ ಕೊಡುಗೆ ದೊಡ್ಡದು. ಅವರ ಪುತ್ರಿ ಇಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಗೀತಾ ಶಿವರಾಜ್ ಕುಮಾರ್ ಅವರನ್ನು ಗೆಲ್ಲಿಸುವ ಕೆಲಸ ಮಾಡಬೇಕು. ನಾನು 40 ವರ್ಷ ಕಾಂಗ್ರೆಸ್‍ನಲ್ಲಿದ್ದವ, ಜಿ.ಎಸ್ ಆಚಾರ್ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸುವಲ್ಲಿ ಶ್ರಮಿಸಿದ್ದೆ, ಕಳೆದ ಹತ್ತು ವರ್ಷದ ಹಿಂದೆ ಬಿಜೆಪಿಗೆ ಬಂದು ಕ್ಷೇತ್ರವನ್ನು ಪೂರ್ಣ ಬಿಜೆಪಿ ಮಾಡಿದೆ. ಮರಳಿ ಕಾಂಗ್ರೆಸ್‍ಗೆ ಬಂದಿದ್ದೇನೆ, ಕಾಂಗ್ರೆಸ್ ಕ್ಷೇತ್ರವನ್ನಾಗಿ ಮಾಡುವ ಛಲ ಹೊಂದಿದ್ದೇನೆ, ಶಾಸಕನಾಗಿ ಕ್ಷೇತ್ರ 3.5ಸಾವಿರ ಕೋಟಿ ರೂ ಅನುದಾನ ತಂದೆ, ವಂಡ್ಸೆ ಗ್ರಾಮಕ್ಕೆ 7.5 ಕೋಟಿ ಅನುದಾನ ಕೊಡಿಸಿದೆ. ರೂ.7.5 ಕೋಟಿ ವೆಚ್ಚದಲ್ಲಿ ವಂಡ್ಸೆ ಚಕ್ರನದಿಗೆ ವೆಂಟೆಂಡ್ ಡ್ಯಾಂ ಮಾಡಿದೆ. ಪರಿಣಾಮ ಈ ಬಾರಿ ಎಲ್ಲ ಬಾವಿಯಲ್ಲೂ ನೀರಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ನನಗೆ ಅವಕಾಶ ಕೊಟ್ಟಿದ್ದಿದ್ದರೆ 50 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲ್ಲುತ್ತಿದ್ದೆ. ರಾಘವಂದ್ರರ ಮೂರು ಬಾರಿ ಸಂಸದರನ್ನಾಗಿ ಮಾಡಿದ್ದೇವೆ, ಈ ಬಾರಿ ಗೀತಾ ಶಿವರಾಜ ಕುಮಾರ್ ಅವರನ್ನು ಗೆಲ್ಲಿಸುವ ಕೆಲಸ ನಾನು ಮಾಡುತ್ತೇನೆ ಎಂದರು.
ವಂಡ್ಸೆ ಗ್ರಾ.ಪಂ. ಮಾಜಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮಾತನಾಡಿ, ರಾಜ್ಯ ಸರ್ಕಾರ ಚುನಾವಣಾ ಪೂರ್ವ ನೀಡಿದ ಪಂಚ ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿದೆ. ಗ್ಯಾರಂಟಿ ಯೋಜನೆಯಿಂದ ಯಾವುದೇ ಅಪಾಯ ಸಂಭವಿಸುವುದಿಲ್ಲ, ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 25 ಗ್ಯಾರಂಟಿಗಳ ಅನುಷ್ಠಾನದ ಗುರಿ ಹೊಂದಿದೆ. ನಾರಿ ನ್ಯಾಯ ಯೋಜನೆಯಲ್ಲಿ ಮಹಿಳೆಗೆ ವರ್ಷಕ್ಕೆ 1 ಲಕ್ಷ ರೂ, ಯುವ ನ್ಯಾಯ ಯೋಜನೆಯಲ್ಲಿ 30 ಲಕ್ಷ ಹೊಸ ಉದ್ಯೋಗ ಸೃಷ್ಟಿ, 5 ಸಾವಿರ ಕೋಟಿ ನಿಧಿ ಸಂಗ್ರಹ, ಕಿಸಾನ್ ನ್ಯಾಯ ಯೋಜನೆಯಲ್ಲಿ ಕನಿಷ್ಠ ಬೆಂಬಲ ಬೆಲೆ ನಿಗಧಿ, ಕೃಷಿ ಸಾಲ ಮನ್ನಾ, ಕೃಷಿ ಕ್ಷೇತ್ರವನ್ನು ಜಿಎಸ್‍ಟಿಯಿಂದ ಮುಕ್ತ ಮಾಡುವುದು ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಅನುಷ್ಠಾನ ಗೊಳಿಸಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಎಸ್.ರಾಜು ಪೂಜಾರಿ, ಚುನಾವಣಾ ಉಸ್ತುವಾರಿ ಜಿ.ಎ.ಬಾವ, ವಂಡ್ಸೆ ಬ್ಲಾಕ್ ಅಧ್ಯಕ್ಷ ಪ್ರದೀಪ ಕುಮಾರ್ ಶೆಟ್ಟಿ ಗುಡಿಬೆಟ್ಟು, ವಂಡಬಳ್ಳಿ ಜಯರಾಮ ಶೆಟ್ಟಿ, ಕೆಡಿಪಿ ಸದಸ್ಯ ಪ್ರಸನ್ನ ಕುಮಾರ್ ಶೆಟ್ಟಿ, ವಂಡ್ಸೆ ಗ್ರಾ.ಪಂ. ಅಧ್ಯಕ್ಷೆ ಗೀತಾ ಅವಿನಾಶ್, ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ, ಶರತ್ ಕುಮಾರ ಶೆಟ್ಟಿ ಬಾಳಿಕೆರೆ, ಬಿ.ಟಿ ರಾಜು, ಸಂತೋಷ್ ಶೆಟ್ಟಿ, ಸರ್ವೋತ್ತಮ ಶೆಟ್ಟಿ, ಸುಧೀರ್ ಕುಮಾರ್ ಶೆಟ್ಟಿ, ಕೆಪಿಸಿಸಿ ಮಾಧ್ಯಮ ವಕ್ತಾರ ಅನಿಲ್ ಉಪಸ್ಥಿತರಿದ್ದರು.
ಚಿತ್ತೂರು ಗ್ರಾಮೀಣ ಕಾಂಗ್ರೆಸ್ ಮುಖಂಡರಾದ ಉದಯ ಜಿ ಪೂಜಾರಿ ಸ್ವಾಗತಿಸಿ, ವಂಡ್ಸೆ ಗ್ರಾ.ಪಂ.ಮಾಜಿ ಸದಸ್ಯ ಗುಂಡು ಪೂಜಾರಿ ಹರವರಿ ವಂದಿಸಿದರು. ವಂಡ್ಸೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗೋವರ್ಧನ್ ಜೋಗಿ ಕಾರ್ಯಕ್ರಮ ನಿರ್ವಹಿಸಿದರು.











