ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗಡೆ ಹಾಗೂ ಕಾರ್ಯಕರ್ತರಿಂದ ಕುಂದಾಪುರದಲ್ಲಿ ರೋಡ್ ಶೋ
ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಬಹಿರಂಗ ಮತ ಪ್ರಚಾರ ಅಂತ್ಯ

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇವಿಎಂನಲ್ಲಿ ಇರುವ ಅಭ್ಯರ್ಥಿಗಳ ಹೆಸರುಗಳು ಮತ್ತು ಅವರ ಅರ್ಹತೆಗಳನ್ನು ನೋಡಿ ಮತದಾರರು ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ ಜಯಪ್ರಕಾಶ್ ಹೆಗಡೆ ಹೇಳಿದರು
ಅವರು ಕುಂದಾಪುರದಲ್ಲಿ ಬುದವಾರ ಸಂಜೆ ನಡೆದ ಕಾಂಗ್ರೆಸ್ ಕಾರ್ಯಕರ್ತರ ರೋಡ್ ಶೋ ಹಾಗೂ ಬಹಿರಂಗ ಮತ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯ ಸಚಿವನಾಗಿ ಶಾಸಕನಾಗಿ ಸಂಸದನಾಗಿ ಸಾಕಷ್ಟು ಅನುದಾನಗಳನ್ನ ನನ್ನ ಕ್ಷೇತ್ರಕ್ಕೆ ತಂದುಕೊಟ್ಟಿರುವ ಹೆಮ್ಮೆ ನನಗಿದೆ ಈ ನಿಟ್ಟಿನಲ್ಲಿ ಮತದಾರರು ನಾನು ನನ್ನ ಅಧಿಕಾರದ ಅವಧಿಯಲ್ಲಿ ಮಾಡಿರುವ ಸಾಧನೆಯನ್ನು ಗಮನಿಸಿ ಈ ಬಾರಿ ಮತ ಚಲಾಯಿಸುತ್ತಾರೆ ಮತ್ತು ನನ್ನನ್ನ ಅತ್ಯಧಿಕ ಅಂತರದಲ್ಲಿ ಗೆಲ್ಲಿಸುತ್ತಾರೆ ಎಂದು ಭರವಸೆ ನೀಡಿದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಾಮಾಜಿಕವಾಗಿ ಮತ್ತು ಮಾನಸಿಕವಾಗಿ ನಾವೆಲ್ಲರೂ ಒಂದಾಗಿದ್ದೇವೆ. ತುಳು ಭಾಷೆಗೆ ಸಂಬಂಧಪಟ್ಟಂತೆ ನಿಘಂಟು ರಚನೆಗೆ ನಾನು ಅನುದಾನ ಬಿಡುಗಡೆ ಮಾಡಿಸಿ ಕೊಟ್ಟಿದ್ದೇನೆ. ಅದೇ ರೀತಿ ಕುಂದಾಪುರದ ಕನ್ನಡ ಭಾಷೆಗೆ ವಿಶೇಷ ಪ್ರತಿನಿತ್ಯತೆಗೆ ಸಂಬಂಧಪಟ್ಟಂತೆ ಒಂದು ಕೋಟಿ ರೂಪಾಯಿ ಅನುದಾನವನ್ನ ಬಿಡುಗಡೆ ಮಾಡಿಸಿದ್ದೇನೆ. ಕುಂದಾಪುರದಲ್ಲಿ ಉಪ್ಪು ನೀರು ತಡೆಗೋಡೆಗೆ ಪೂರಕವಾಗಿ ವೆಂಟೆಡ್ ಡ್ಯಾಮ್ ನಿರ್ಮಿಸುವ ಮೂಲಕ ಕೃಷಿಕರಿಗೆ ಮತ್ತು ಕುಡಿಯುವ ನೀರಿನ ಸೌಲಭ್ಯಕ್ಕೆ ಅನುಕೂಲ ಕಲ್ಪಿಸಿ ಕೊಟ್ಟಿದ್ದೇನೆ. ಸಾರ್ವಜನಿಕ ಕ್ಷೇತ್ರದಲ್ಲಿ ಅಧಿಕಾರ ಇದ್ದಾಗಲೂ ಇಲ್ಲದಿದ್ದಾಗಲೂ ಜನಸಾಮಾನ್ಯರ ಸೇವೆ ಮಾಡುತ್ತಾ ಬಂದಿರುವ ನನ್ನನ್ನು ಈ ಬಾರಿ ಪಕ್ಷಾತೀತವಾಗಿ ಅತ್ಯಧಿಕ ಬಹುಮತದಿಂದ ಮತದಾರರು ನನ್ನನ್ನು ಗೆಲ್ಲಿಸುತ್ತಾರೆ ಎಂದು ಹೇಳಿದರು.
ಇದೇ ಸಂದರ್ಭ ಮಾತನಾಡಿದ ಮಾಜಿ ಶಾಸಕ ಕೆ ಗೋಪಾಲ ಪೂಜಾರಿ, ಸುಳ್ಳುಗಳ ಸರದಾರ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪೂಜಾರಿ ಜನಸಾಮಾನ್ಯರಿಗೆ ಯಾವುದೇ ರೀತಿಯ ಸ್ಪಂದನೆ ನೀಡದ ಶ್ರೀನಿವಾಸ ಪೂಜಾರಿಯವರನ್ನು ಈ ಬಾರಿ ಜನ ತಿರಸ್ಕರಿಸುತ್ತಾರೆ ಎಂದರು.
ಮಾಜಿ ಶಾಸಕ ಬಿ ಎಂ ಸುಕುಮಾರ ಶೆಟ್ಟಿ ಮಾತನಾಡಿ, ತನ್ನ ಅಧಿಕಾರದ ಆಸೆಗಾಗಿ ಬೇರೆ ನಾಯಕರನ್ನು ಬಲಿಕೊಟ್ಟು ತನ್ನ ಬೇಳೆ ಬೇಯಿಸಿಕೊಳ್ಳುತ್ತಿರುವ ಶ್ರೀನಿವಾಸ ಪೂಜಾರಿಗೆ ಈ ಬಾರಿಯ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಸಭಾ ಕಾರ್ಯಕ್ರಮಕ್ಕೆ ಮುನ್ನ ಕಾಂಗ್ರೆಸ್ನ ಕಾರ್ಯಕರ್ತರ ಮೆರವಣಿಗೆಯೊಂದಿಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗಡೆ ಕಾಂಗ್ರೆಸ್ನ ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಶಿವರಾಮಶೆಟ್ಟಿ ಮಲ್ಯಾಡಿ, ಹಾಲಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಹಿರಿಯ ಕೆಪಿಸಿಸಿ ಸದಸ್ಯ ಎಂ.ಎ.ಗಪೂರ್ ಸುರೇಂದ್ರ ಶೆಟ್ಟಿ ಸಹನಾ, ಕೋರ್ಟ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್, ಚುನಾವಣಾ ಉಸ್ತುವಾರಿ ಜಿಎ ಭಾವ ಮೊದಲಾದವರು ಭಾಗವಹಿಸಿದ್ದರು.
ಕುಂದಾಪುರದ ಶಾಸ್ತ್ರಿ ವೃತ್ತದಿಂದ ಆರಂಭವಾದ ರೋಡ್ ಶೋ ಪಾರಿಜಾತ ವೃತ ಹಳೆ ಬಸ್ ನಿಲ್ದಾಣ ಮೂಲಕ ಸಾಗಿ ಹೊಸ ಬಸ್ ನಿಲ್ದಾಣದಲ್ಲಿ ತಿರುಗಿ ಮತ್ತೆ ಪುನಃ ಶಾಸ್ತ್ರಿ ವೃತ್ತದಲ್ಲಿ ಸಮಾಪನಗೊಂಡಿತು.











