ಕೋಟ ಸುರೇಶ್ ಅವರಿಗೆ ಯಕ್ಷಸೌರಭ ಕಲಾರಂಗದ ಪ್ರಶಸ್ತಿ ಪ್ರದಾನ
ಕುಂದಾಪುರ ಮಿರರ್ ಸುದ್ದಿ…
ಕೋಟ: ಯಕ್ಷಗಾನ ಶ್ರೀಮಂತ ಕಲೆ ಅದನ್ನು ಮುಂದಿನ ತಲೆಮಾರಿಗೆ ಅರ್ಥಪೂರ್ಣವಾಗಿ ಕೊಂಡ್ಯೋಯುವ ಕೆಲಸ ಆಗಬೇಕಿದೆ ಎಂದು ಯಕ್ಷಗಾನ ವಿಮರ್ಶಕ ಎಚ್ ಸುಜಯೀಂದ್ರ ಹಂದೆ ನುಡಿದರು.
ಶನಿವಾರ ಕೋಟದ ಯಕ್ಷಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ ಕೋಟ ಇದರ ಒಂಭತ್ತನೆ ವರ್ಷದ ವಾರ್ಷಿಕೋತ್ಸವ ರಂಗಾರ್ಪಣಾ 2024ರ ಕಾರ್ಯಕ್ರಮದಲ್ಲಿ ಅಭಿನಂದನಾ ನುಡಿಗಳನ್ನಾಡಿ ಯಕ್ಷಗಾನ ವಿಶ್ಚದೆಲ್ಲೆಡೆ ವಿಶ್ವಗಾನವಾಗಿ ಪಸರಿಸಿಕೊಂಡಿದೆ. ಬೇರೆ ಕಲೆಗಳಿಗಿಂತ ವಿಶಿಷ್ಠ ಭಕ್ತಿ ಭಾವದಿಂದ ನೋಡುವ ಯಕ್ಷಗಾನ ಶ್ರೇಷ್ಠತೆ ಪಡೆದುಕೊಂಡಿದೆ.
ಅದರಲ್ಲಿ ಬಡಗು ತೆಂಕು ಮೇಳೈಸಿದರೂ ನಡು ತಿಟ್ಟಿಗೆ ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ಸಾಂಪ್ರದಾಯಿಕ ವೇಷಭೂಣ ಹಾವ ಭಾವಗಳಿಂದ ತನ್ನದೆ ಆದ ವೈಶಿಷ್ಟ್ಯತೆ ಪಡೆದುಕೊಂಡಿದೆ. ಈ ನಡುವೆ ಯಕ್ಷಗಾನ ಬಡವಾಗುತ್ತಿರುವುದು ಬೇಸರದಾಯಕ ವಿಚಾರವಾಗಿದೆ. ಬೆರಳೆಣಿಕೆಯ ಕಲಾವಿದರು ಯಕ್ಷಗಾನದ ಮೌಲ್ಯಗಳನ್ನು ಉಳಿಸಿಕೊಂಡು ಬರುತ್ತಿದ್ದಾರೆ. ಈ ದಿಸೆಯಲ್ಲಿ ಯಕ್ಷಗಾನದ ಮೂಲಕ ಮೊಳಹಳ್ಳಿ,ಶಿರಿಯಾರರ ಶೈಲಿಯನ್ನು ಕಲಾರಸಿಕರಿಗೆ ಧಾರೆ ಎರೆಯುತ್ತಿದ್ದಾರೆ. ಇಂಥಹ ಮಹಾನ್ ಕಲಾವಿದರಿಗೆ ಯಕ್ಷಸೌರಭ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಪ್ರಶಂಸೆ ನೀಡಿದರಲ್ಲದೆ ಹವ್ಯಾಸಿ ಯಕ್ಷ ತಂಡಗಳು ಯಕ್ಷಗಾನದ ಮೌಲ್ಯಕ್ಕೆ ವಿಶೇಷ ಆಸಕ್ತಿ ನೀಡುತ್ತಿವೆ. ಇದು ಆಶಾದಾಯಕ ಹಾಗೇ ಕೋಟ ಸುರೇಶರಂತಹ ಮಹಾನ್ ಕಲಾವಿದರು ಡಾ.ಕೋಟ ಶಿವರಾಮ ಕಾರಂತ, ಕೋಟ ವೈಕುಂಠರಂತೆ ಜಗತ್ ಪ್ರಸಿದ್ಧಿ ಪಡೆಯಲಿ ಎಂದು ಹಾರೈಸಿ ಇತ್ತೀಚಿಗಿನ ದಿನಗಳಲ್ಲಿ ಪ್ರಸಿದ್ಧ ಕಲಾವಿದರು ಯಕ್ಷಲೋಕದಿಂದ ಇನ್ನಿಲದಂತ್ತಾಗುತ್ತಿರುವುದು ಬೇಸರ ನೀಡಿದೆ. ಕಲಾವಿದರು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕೆಂದು ಕರೆ ಇತ್ತರು.
ಕಾರ್ಯಕ್ರಮವನ್ನು ಮಯ್ಯ ಯಕ್ಷಶ್ರೀ ಪ್ರತಿಷ್ಠಾನ ಸಂಸ್ಥಾಪಕ ಋಷಿಕುಮಾರ್ ಮಯ್ಯ ಉದ್ಘಾಟಿಸಿದರು.
ಇದೇ ವೇಳೆ ಯಕ್ಷಸೌರಭ ಕಲಾರಂಗದ ಪ್ರಶಸ್ತಿಯನ್ನು ಕೋಟ ಸುರೇಶ್ ಇವರಿಗೆ ಸಂಸ್ಕೃತಿ ವಿಶ್ಚ ಪ್ರತಿಷ್ಠಾನ ಉಡುಪಿ ಇದರ ಸ್ಥಾಪಕ ವಿಶ್ವನಾಥ ಶೆಣೈ ಪ್ರದಾನಿಸಿದರು.
ಸೌರಭ ಸಂಮಾನವನ್ನುವ ಹಿರಿಯ ಹವ್ಯಾಸಿ ಕಲಾವಿದ ಮಹಾಬಲ ಭಂಢಾರಿ ಕೋಡಿ, ಪ್ರಸಂಗಕರ್ತ ಕಲಾವಿದ ಮಹಾಬಲ ಹೇರಿಕುದ್ರು, ಹವ್ಯಾಸಿ ಕಲಾವಿದ ಜಯ ಕಡೆಕಾರ್ ಇವರುಗಳಿಗೆ ನೀಡಲಾಯಿತು.
ವಿಶೇಷವಾಗಿ ಗುರುವಂದನೆಯನ್ನು ಯಕ್ಷಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರಿಗೆ ಸಮರ್ಪಿಸಲಾಯಿತು. ಇತ್ತೀಚಿಗೆ ಅಗಲಿದ ಯಕ್ಷಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಹಾಗೂ ಹವ್ಯಾಸಿ ಕಲಾವಿದ ಮಟಪಾಡಿ ಪ್ರಭಾಕರ್ ಆಚಾರ್ ಇವರುಗಳಿಗೆ ನುಡಿನಮನ ಸಲ್ಲಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ನಿವೃತ್ತ ಬ್ಯಾಂಕ್ ಅಧಿಕಾರಿ ಭುವನ್ ಪ್ರಸಾದ ಹೆಗ್ಡೆ,ವಿದ್ಯುತ್ ಗುತ್ತಿಗೆದಾರ ಕೆ.ಆರ್.ನಾಯಕ್ ಉಪಸ್ಥಿತರಿದ್ದರು.
ಯಕ್ಷಸೌರಭದ ಅಧ್ಯಕ್ಷ ರಾಘವೇಂದ್ರ ಕರ್ಕೇರ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಮಂಜುನಾಥ್ ಆಚಾರ್ ನಿರೂಪಿಸಿದರು. ಕಾರ್ಯದರ್ಶಿ ಶ್ರೀನಾಥ ಉರಾಳ ವಂದಿಸಿದರು. ನಂತರ ಯಕ್ಷಸೌರಭದ ಸದಸ್ಯರಿಂದ ಶ್ರೀ ದೇವಿ ಮಹಾತ್ಮೆಯಕ್ಷಗಾನ ಪ್ರದರ್ಶನಗೊಂಡಿತು.











