ಕುಂದಾಪುರ ಮಿರರ್ ಸುದ್ದಿ…
ಬೈಂದೂರು :ನರೇಂದ್ರ ಮೋದೀಜಿಯವರ ನೇತೃತ್ವದ ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ 7ನೇ ಬಾರಿಗೆ ಮಂಡಿಸಿರುವ ಬಜೆಟ್ ಸರ್ವ ವ್ಯಾಪಿ, ಸರ್ವ ಸ್ಪರ್ಶಿಯಾಗಿದ್ದು, ದೇಶವು ವಿಶ್ವದಲ್ಲಿ ಆರ್ಥಿಕವಾಗಿ ಅತೀ ವೇಗವಾಗಿ ಬೆಳೆಯಲು ಪೂರಕವಾದ ಬಜೆಟ್ ಆಗಿದೆ. ಹಣದುಬ್ಬರ ಪ್ರಮಾಣವು ಕಳೆದ ವರ್ಷ 5.8% ಇದ್ದು, 4.5 % ಇಳಿಯುವಲ್ಲಿ ಈ ಬಜೆಟ್ ಸಹಕಾರಿಯಾಗಲಿದೆ. ಅಲ್ಲದೇ ಪ್ರಸ್ತುತ ಈಗಿರುವ 3 ಟ್ರಿಲಿಯನ್ ಆರ್ಥಿಕ ವ್ಯವಹಾರವು 5 ಟ್ರಿಲಿಯನ್ ಅಷ್ಟಾಗುವ ಎಲ್ಲಾ ನಿರೀಕ್ಷೆಯಿದ್ದು ಜಿಡಿಪಿ ಪ್ರಮಾಣವು ಶೇ. 6.5 ರಿಂದ 7 ಕ್ಕೆ ಏರಿಕೆಯಾಗುವುದಾಗಿ ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2030ರವರೆಗೆ ಭಾರತದಲ್ಲಿ ಪ್ರತಿ ವರ್ಷ 78 ಲಕ್ಷ ಯುವಕ/ಯುವತಿಯರಿಗೆ ಉದ್ಯೋಗ ದೊರೆಯುವಲ್ಲಿ ಈ ಬಾರಿಯ ಬಡ್ಜೆಟ್ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಕೈಗಾರಿಕಾ ಉತ್ಪನ್ನ ವಲಯದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.
ಈ ಬಾರಿ ಕೃಷಿ ಕ್ಷೇತ್ರ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನು ಮುಂದಿನ 5 ವರ್ಷಗಳಿಗೆ ವಿಸ್ತರಣೆ ಮಾಡುವುದರ ಮೂಲಕ ಬಡಜನರಿಗೆ ಅನ್ನ ನೀಡುವ ಯೋಜನೆ ಮುಂದುವರೆಸಲಾಗಿದೆ. ಶಿಕ್ಷಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆಧ್ಯತೆ ನೀಡುವುದರ ಜೊತೆಗೆ ಉನ್ನತ ಶಿಕ್ಷಣಕ್ಕೆ ನೀಡಲಾಗುವ ಸಾಲದ ಮಿತಿಯನ್ನು ಹೆಚ್ಚಿಸಲಾಗಿದೆ. ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಸ್ವಯಂ ಉದ್ಯೋಗಕ್ಕೆ ಹೆಚ್ಚಿನ ಆಧ್ಯತೆ ನೀಡುವ ಸಲುವಾಗಿ ಈಗಿರುವ ಮುದ್ರಾ ಯೋಜನೆಯಡಿ ಇರುವ ಸಾಲದ ಮಿತಿಯನ್ನು ಹೆಚ್ಚಿಸಲಾಗಿದೆ. ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆಧ್ಯತೆ ನೀಡಿದೆ.
ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ 3 ಕೋಟಿ ಹೆಚ್ಚುವರಿ ಹೊಸ ಮನೆಗಳ ನಿರ್ಮಾಣಕ್ಕೆ ಆಧ್ಯತೆ ನೀಡುವುದರ ಮೂಲಕ ಬಡವರ ಬಾಳಿಗೆ ಆಶಾಕಿರಣ ನೀಡಿದೆ. ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆಯಡಿ ಮುಂದಿನ ಹಂತದ ಜಾರಿಗೆ ನಿರ್ಧರಿಸಿದ್ದು, ಇದರಿಂದಾಗಿ 20 ಲಕ್ಷ ಗ್ರಾಮೀಣ ಜನವಸತಿ ಪ್ರದೇಶಗಳಿಗೆ ಉತ್ತಮ ರಸ್ತೆ ಸಂಪರ್ಕ ದೊರೆಯಲಿದೆ. ಪ್ರವಾಸೋಧ್ಯಮಕ್ಕೆ ಹೆಚ್ಚಿನ ನೆರವು ನೀಡಲು ಜಾಗತಿಕ ಪ್ರವಾಸೋಧ್ಯಮ ಹಬ್ ಸ್ಥಾಪನೆಗೆ ಕ್ರಮ ಕೈಗೊಂಡಿದೆ. ಆದಾಯ ತೆರಿಗೆ ಪದ್ದತಿಯಲ್ಲಿ ಹೆಚ್ಚಿನ ನೆರವು ನೀಡುವದರ ಮೂಲಕ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಿಕೊಡಲಾಗಿದೆ.
ಈ ರೀತಿ ಸರ್ವ ವ್ಯಾಪಿ, ಸರ್ವ ಸ್ಪರ್ಶಿ ಬಜೆಟ್ ಮಂಡಿಸಲು ಪ್ರೇರಕರಾದ ಪ್ರಧಾನ ಮಂತ್ರಿ ನರೇಂದ್ರ ಮೋದೀಜಿಯವರಿಗೆ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ರವರಿಗೆ
ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರ ಅಭಿನಂದನೆ ಸಲ್ಲಿಸಿದ್ದಾರೆ.










