ಕುಂದಾಪುರ ಮಿರರ್ ಸುದ್ದಿ…

ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ. ರಾಘವೇಂದ್ರ ಅವರ ಹುಟ್ಟುಹಬ್ಬದ ನಿಮಿತ್ತ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಸೇವಾ ಕಾರ್ಯ ನಡೆಸುವ ಮೂಲಕ ಹುಟ್ಟುಹಬ್ಬವನ್ನು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರ ನೇತೃತ್ವದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ವಂಡ್ಸೆಯ ಎಸ್ಎಲ್ಆರ್ ಎಂ ಘಟಕಕ್ಕೆ ಶಾಸಕರಾದ ಗುರುರಾಜ್ ಗಂಟಿಹೊಳೆ ದಂಪತಿ ಭೇಟಿ ಮಾಡಿ, ಘಟಕದಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರ ಯೋಗಕ್ಷೇಮ ವಿಚಾರಿಸಿದರು ಮಾತ್ರವಲ್ಲದೇ ಕಾರ್ಯ ಕ್ಷೇತ್ರದಲ್ಲಿ ಅವರು ಎದುರಿಸುತ್ತಿರುವ ಸಮಸ್ಯೆಗಳ ಮಾಹಿತಿಯನ್ನು ಪಡೆದುಕೊಂಡರು. ನಂತರ ಬಿ.ವೈ. ರಾಘವೇಂದ್ರ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಟ್ಟೆ ಸಹಿತವಾಗಿ ಬಾಗೀನವನ್ನು ಅಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರಿಗೆ ವಿತರಿಸಲಾಯಿತು. ಇದೇ ವೇಳೆ ಸಿಹಿ ಹಂಚುವ ಕಾರ್ಯಕ್ರಮವೂ ನಡೆಯಿತು.
ಶಾಸಕರಾದ ಗುರುರಾಜ್ ಗಂಟೆ ಹೊಳೆಯವರು ಈ ವೇಳೆ ಮಾತನಾಡಿ ಎಸ್ಎಲ್‌ಆರ್‌ಎಂ ಘಟಕದ ಮಹತ್ವ ಹಾಗೂ ಸ್ವಚ್ಛತೆಯ ದೃಷ್ಟಿಯಿಂದ ಎಸ್ ಎಲ್ ಆರ್ ಎಂ ಘಟಕ ಎಷ್ಟು ಅವಶ್ಯಕವಿದೆ ಎಂಬುದನ್ನು ವಿವರಿಸಿ. ಘಟಕದ ಕೆಲಸ ನಿರ್ವಹಿಸುವವರು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವಿಶೇಷ ಗಮನ ಹಾಗೂ ಎಚ್ಚರಿಕೆ ವಹಿಸಲು ಸಲಹೆ ನೀಡಿದರು. ಅಗತ್ಯ ಸುರಕ್ಷತ ಪರಿಕರಗಳನ್ನು ಬಳಸಿ ಕಾರ್ಯನಿರ್ವಹಿಸಲು ತಿಳಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತುಸದಸ್ಯರು, ಸ್ಥಳೀಯ ಕಾರ್ಯಕರ್ತರು, ಪ್ರಮುಖರು ಉಪಸ್ಥಿತರಿದ್ದರು.
ಸಂತ್ರಸ್ತರಿಗೆ ನೆರವು
ತಗ್ಗರ್ಸೆಯ ಗುಡ್ಡಿಯಂಗಡಿಯಲ್ಲಿ ಭಾರೀ ಗಾಳಿಮಳೆಗೆ ಮರವೊಂದು ಮನೆಯ ಮೇಲೆ ಬಿದ್ದು ಸಂಪೂರ್ಣ ಮನೆ ಮೇಲ್ಛಾವಣಿ ಹಾನಿಯಾಗಿತ್ತು. ಸಮೃದ್ಧ ಬೈಂದೂರು ಟ್ರಸ್ಟ್ ಸಹಯೋಗದಲ್ಲಿ ಒಂದೇ ತಿಂಗಳಲ್ಲಿ ಮನೆಯ ಮೇಲ್ಛಾವಣೆ ಸಿದ್ಧಪಡಿಸಿ, ಹೊಸ ಹೆಂಚುಗಳನ್ನು ಹಾಕಿಸಿ ಕುಟುಂಬದ ಸದಸ್ಯರಿಗೆ ಶುಕ್ರವಾರ ಮನೆ ಹಸ್ತಾಂತರ ನಡೆಯಿತು.
ಸಂಸದರಾದ ಬಿ.ವೈ.ರಾಘವೇಂದ್ರ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಮನೆ ಹಸ್ತಾಂತರಿಸಿ ಕುಟುಂಬದ ಸದಸ್ಯರಿಗೆ ಶುಭ ಹಾರೈಸಿದರು.
ಸಮೃದ್ಧ ಬೈಂದೂರು ಟ್ರಸ್ಟ್ ಅಧ್ಯಕ್ಷ ಉದ್ಯಮಿ ಸುರೇಶ್ ಶೆಟ್ಟಿ,ಸಮೃದ್ಧ ಬೈಂದೂರು ಟ್ರಸ್ಟಿನ ಕಾರ್ಯಕರ್ತರುಸಹಿತ ಸ್ಥಳೀಯ ಕಾರ್ಯಕರ್ತರು, ಪ್ರಮುಖರು ಉಪಸ್ಥಿತರಿದ್ದರು.











