ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಸರ್ಕಾರಿ ಸೇವೆಯಲ್ಲಿದ್ದ ವೈದ್ಯರೊಬ್ಬರಿಗೆ ಅವಾಚ್ಯವಾಗಿ ನಿಂದಿಸಿ, ಹಲ್ಲೆಗೆ ಮುಂದಾಗಿ, ಟೇಬಲ್ ಮೇಲಿದ್ದ ದಾಖಲೆಗಳನ್ನು ಹರಿದು ಹಾಕಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ಇಬ್ಬರ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನವಂಬರ್ 3ರಂದು ರಾತ್ರಿ ಘಟನೆ ನಡೆದಿದ್ದು, ಕರ್ತವ್ಯದಲ್ಲಿದ್ದ ಡಾ. ಮೂರ್ತಿರಾಜ್ ಎಂಬುವರು ದೂರು ನೀಡಿದವರು. ಆರೋಗ್ಯ ತಪಾಸಣೆಗೆ ಬಂದಿದ್ದ ರಾಧ ಅವರ ಪತಿ ನಾಗರಾಜ ಗಾಣಿಗ ಹಾಗೂ ಜೊತೆಗಿದ್ದ ಮಹಿಳೆ ಆರೋಪಿತರು.
ನವಂಬರ್ 3ರ ತಡರಾತ್ರಿ ಸುಮಾರು 11.15 ಸಮಯಕ್ಕೆ ರಾಧಾ ಹಾಗೂ ಅವರ ಸ್ನೇಹಿತೆ ಮಹಿಳೆಯೊಬ್ಬರು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಹೊಟ್ಟೆ ನೋವಿನ ಕಾರಣಕ್ಕೆ ಬಂದಿದ್ದರು. ಈ ಸಂದರ್ಭ ವೈದ್ಯ ಮೂರ್ತಿರಾಜ್ ಅವರು ಶುಶ್ರೂಷಕಿ ಶೋಭಾ ಎಂಬವರ ಜೊತೆ ರೋಗಿಯನ್ನು ತಪಾಸಣೆ ನಡೆಸಿ ಒಳರೋಗಿಯಾಗಿ ದಾಖಲಾಗುವಂತೆ ಸೂಚಿಸಿದ್ದರು. ಆಗ ಅಲ್ಲಿಗೆ ಬಂದ ರಾಧಾ ಅವರ ಪತಿ ನಾಗರಾಜ್ ಗಾಣಿಗರಿಗೆ ವೈದ್ಯ ಮೂರ್ತಿರಾಜ್ ಅವರು ರಾಧ ಅವರನ್ನು ಒಳ ರೋಗಿಯಾಗಿ ದಾಖಲಿಸುವಂತೆ ಸೂಚನೆ ನೀಡಿ ಕೇಸ್ ಶೀಟ್ ಅನ್ನು ಕೊಟ್ಟಿದ್ದಾರೆನ್ನಲಾಗಿದೆ. ಆದರೆ ನಾಗರಾಜ್ ಗಾಣಿಗ ಹಾಗು ಅವರ ಪತ್ನಿ ರಾಧ ಅವರು ನಾವಿಲ್ಲಿಂದ ಹೋಗುತ್ತೇವೆ ಎಂದು ಹೊರ ಹೋಗಿದ್ದರು. ರಾತ್ರಿ 11:45 ರ ಸುಮಾರಿಗೆ ಏಕಾಏಕಿ ಒಳನುಗ್ಗಿದ್ದ ಆರೋಪಿ ನಾಗರಾಜ್ ಸೇವೆಯಲ್ಲಿದ್ದ ಡಾ. ಮೂರ್ತಿರಾಜ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಠಡಿಯ ಒಳಗೆ ಪ್ರವೇಶಿಸಿ ಹಲ್ಲೆಗೆ ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಟೇಬಲ್ ಮೇಲಿದ್ದ ದಾಖಲೆಗಳನ್ನೆಲ್ಲ ಹರಿದು ಹಾಕಲಾಗಿದ್ದು ರಾಧಾ ಅವರ ಕೇಸ್ ಶೀಟನ್ನು ತೆಗೆದುಕೊಂಡು ಹೋಗಿರುತ್ತಾರೆ ಎಂದು ಡಾ. ಮೂರ್ತಿರಾಜ್ ಆರೋಪಿಸಿದ್ದಾರೆ.
ಈ ಬಗ್ಗೆ ಕರ್ನಾಟಕ ಸರ್ಕಾರಿ ವೈದ್ಯರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಡಾ. ನಾಗೇಶ್ ನೇತೃತ್ವದಲ್ಲಿ ವೈದ್ಯರ ತಂಡ ತಪ್ಪಿತಸ್ಥ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕುಂದಾಪುರ ಡಿವೈಎಸ್ಪಿ ಅವರಿಗೆ ಮನವಿ ನೀಡಿದ್ದಾರೆ.