ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೆದ್ದಾರಿ ತುಂಬಾ ಅಲ್ಲಲ್ಲಿ ಬ್ಯಾರೀಕೆಡ್ ಗಳನ್ನು ಅಳವಡಿಸಿದ ಪರಿಣಾಮ ವಾಹನ ಸವಾರರ ಮೇಲೆ ಬೀಳುತ್ತಿದೆ ಎನ್ನುವ ಆರೋಪ ಹಿಂದಿನಿಂದಲೂ ಕೇಳಿ ಬರುತ್ತಿತ್ತು. ಅಲ್ಲದೆ ರಾತ್ರಿ ಬ್ಯಾರಿಕೇಡ್ ತೆರವುಗೊಳಿಸದೆ ಇರುವುದರಿಂದ ಅಪಘಾತಗಳು ನಡೆಯುತ್ತಲೇ ಇವೆ.
ಬುಧವಾರ ತಡರಾತ್ರಿ ಕುಂದಾಪುರದ ಅಂಕದಕಟ್ಟೆ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಟ್ಕಳ ಕಡೆಯಿಂದ ಮಂಗಳೂರು ಕಡೆಗೆ ಚಲಿಸುತ್ತಿದ್ದ ವಾಣಿಜ್ಯ ಸರಕು ತುಂಬಿದ ಲಾರಿಯೊಂದು ಬ್ಯಾರಿಕೇಡ್ ತಪ್ಪಿಸಲು ಹೋಗಿ ಹೆದ್ದಾರಿ ಬದಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.
ಅಪಘಾತದಿಂದ ಲಾರಿಯ ಮುಂಭಾಗ ನಜ್ಜುಗುಜ್ಜಾಗಿದೆ. ಬ್ಯಾರಿಕೇಡ್ ಆವಾಂತರ ಉಪಯೋಗಕ್ಕಿಂತ ಉಪದ್ರವವೇ ಹೆಚ್ಚಾಗಿದೆ ಎನ್ನುವ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ. ಇನ್ನಾದರೂ ಸಂಬಂಧಪಟ್ಟವರು ಕ್ರಮ ಕೈಗೊಳ್ಳುವರೆ ಕಾದು ನೋಡಬೇಕಿದೆ.











