ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರ ಕಾರು ಶುಕ್ರವಾರ ಸಂಜೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಕೋಡೂರಿನಲ್ಲಿ ಅಪಘಾತಕ್ಕೀಡಾಗಿದೆ. ಶಾಸಕ ಗುರುರಾಜ್ ಗಂಟಿಹೊಳೆ ತಮ್ಮ ಕಾರಿನಲ್ಲಿ ಶಿವಮೊಗ್ಗದಿಂದ ಉಡುಪಿ ಕಡೆಗೆ ಪ್ರಯಾಣಿಸುತ್ತಿದ್ದರು. ಶಾಸಕರ ಕಾರಿನ ಮುಮದೆ ಮತ್ತು ಹಿಂದೆ ಒಂದೊಂದು ಕಾರುಗಳು ಪ್ರಯಾಣಿಸುತ್ತಿದ್ದವು.
ಕೋಡೂರು ಸಮೀಪ ರಸ್ತೆಯಲ್ಲಿ ದನಗಳಿದ್ದು, ಅಪಘಾತ ತಪ್ಪಿಸಲು ಎದುರಿನ ಕಾರು ಚಾಲಕ ಸಡನ್ ಬ್ರೇಕ್ ಹಾಕಿದ್ದನೆನ್ನಲಾಗಿದೆ. ಇದರಿಂದಾಗಿ ಹಿಂದಿನಿಂದ ಬಂದ ಶಾಸಕರ ಕಾರು ಹಾಗೂ ಅದರ ಹಿಂದಿನಿಂದ ಬಂದ ಕಾರುಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ ಎನ್ನಲಾಗಿದೆ. ಸರಣಿ ಅಪಘಾತದಲ್ಲಿ ಶಾಸಕರ ಕಾರು ಸೇರಿದಂತೆ 3 ಕಾರುಗಳು ಸ್ವಲ್ಪ ಮಟ್ಟಿಗೆ ಜಖಂಗೊಂಡಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.
ರಿಪ್ಪನ್ ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಬಳಿಕ ಶಾಸಕ ಗಂಟಿಹೊಳೆ ಅವರು ಉಡುಪಿಯತ್ತ ಪ್ರಯಾಣ ಮೊಟಕುಗೊಳಿಸಿ ಮತ್ತೊಂದು ಕಾರಿನಲ್ಲಿ ಬೈಂದೂರಿನ ಕಡೆಗೆ ತೆರಳಿದ್ದಾರೆ.











