ಕುಂದಾಪುರ ಮಿರರ್ ಸುದ್ದಿ…

ಉಡುಪಿ :ಕರ್ನಾಟಕ ರಾಜ್ಯ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಉಡುಪಿ ಜಿಲ್ಲಾ ಶಾಖೆಯ ಆಶ್ರಯದಲ್ಲಿ ಸರಕಾರಿ ಪ್ರೌಢಶಾಲೆ ಒಳಕಾಡು ಉಡುಪಿ ಇಲ್ಲಿ ನಡೆದ ಉಡುಪಿ ಜಿಲ್ಲಾ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಒಂದು ದಿನದ ಕಾರ್ಯಾಗಾರವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ವಿದ್ಯಾರ್ಥಿಗಳ ಶಾರೀರಿಕ ಬೌದ್ಧಿಕ ಸಾಮಾಜಿಕ ನೈತಿಕ ವಿಕಾಸಕ್ಕೆ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಹಿರಿದು. ಮಗುವಿನ ಸರ್ವಾಂಗೀಣ ಬೆಳವಣಿಗೆ ಮಾಡುವುದೇ ಶಿಕ್ಷಣದ ಗುರಿ ಆದ್ದರಿಂದಲೇ ದೈಹಿಕ ಶಿಕ್ಷಣ ಕ್ಷೇತ್ರವನ್ನು ಶಿಕ್ಷಣದ ಅವಿಭಾಜ್ಯ ಅಂಗ ಎಂದು ಪರಿಗಣಿಸಲಾಗಿದೆ ಎಂದು ಅಭಿಮತಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಲೋಕೇಶ್ ಇವರು ಶಿಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಾ ದೈಹಿಕ ಶಿಕ್ಷಣ ಶಿಕ್ಷಕರು ಶಾಲೆಯ ಆಧಾರ ಸ್ಥಂಬ. ಮಕ್ಕಳಲ್ಲಿ ಶಿಸ್ತು ಬೆಳೆಸುವ ಜವಾಬ್ದಾರಿ ನಿಮ್ಮದು. ಶಿಸ್ತಿನಿಂದ ನೀವು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಮಕ್ಕಳು ರಾಜ್ಯ, ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತಾಗಲಿ ಎಂದು ಶುಭ ಹಾರೈಸಿದರು.
ಉಡುಪಿ ಡಯಟ್ ನ ಪ್ರಾಂಶುಪಾಲರಾದ ಅಶೋಕ್ ಕಾಮತ್ ಮಾತನಾಡಿ ಶಿಕ್ಷಣ ಜೀವನದ ಅಂಗ ಬುದ್ಧಿಶಕ್ತಿಗೆ ಪಠ್ಯ ಶಿಕ್ಷಣವಾದರೆ ದೇಹ ಮತ್ತು ಹೃದಯ ಉತ್ತಮವಾಗಿರಲು ಕ್ರೀಡೆ ಅವಶ್ಯಕ ಎಂದರು
ಉಡುಪಿ ಜಿಲ್ಲಾ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಕುಸುಮಾಕರ್ ಶೆಟ್ಟಿ ಕಾರ್ಯಗಾರದ ಅವಶ್ಯಕತೆ ಮತ್ತು ರೂಪರೇಷೆ ಗಳನ್ನು ಸಭೆಯ ಮುಂದೆ ಮಂಡಿಸಿದರು
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಗಿರೀಶ್ ನಾಯಕ್ ಸಭೆಯಲ್ಲಿ ಉಪಸ್ಥಿತರಿದ್ದು, ದೈಹಿಕ ಶಿಕ್ಷಣ ಶಿಕ್ಷಕರ ಬಹುದಿನದ ಬೇಡಿಕೆ ಮತ್ತು ಮುಂದಿನ ಹೋರಾಟದ ರೂಪುರೇಷೆಗಳನ್ನು ಸಭೆಯ ಮುಂದಿಟ್ಟು ಬೇಡಿಕೆ ಪತ್ರವನ್ನು ಸಮಸ್ತ ದೈಹಿಕ ಶಿಕ್ಷಣ ಶಿಕ್ಷಕರ ಸಮ್ಮುಖದಲ್ಲಿ ಸದನದಲ್ಲಿ ಸಮಸ್ತ ದೈಹಿಕ ಶಿಕ್ಷಣ ಶಿಕ್ಷಕರ ಪರ ಧ್ವನಿ ಯಾಗುವಂತೆ ಶಾಸಕರಾದ ಯಶ್ ಪಾಲ್ ಸುವರ್ಣ ರವರಿಗೆ ಹಸ್ತಾಂತರಿಸಿದರು.
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಚಂದ್ರಶೇಖರ್ ಶೆಟ್ಟಿ, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾ. ಎಲ್ಲಮ್ಮ , ಒಳಕಾಡು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಪೂರ್ಣಿಮಾ, ಯುವಜನ ಸೇವಾ ಕ್ರೀಡಾಧಿಕಾರಿ ರಿತೇಶ್ ಶೆಟ್ಟಿ, ವಸಂತ ಜೋಗಿ, ಉಡುಪಿ ಜಿಲ್ಲಾ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಸುವರ್ಣ, ಐದು ವಲಯದ ದೈಹಿಕ ಶಿಕ್ಷಣ ಪರೀಕ್ಷಣಾಧಿಕಾರಿಗಳಾದ ರವಿಚಂದ್ರ ಕಾರಂತ್,ಸತ್ಯನಾರಾಯಣ ವಿಜಯ್ ಕುಮಾರ್ ಶೆಟ್ಟಿ, ರವೀಂದ್ರ ನಾಯ್ಕ, ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪರೀಕ ಯೋಗಕ್ಷೇಮ ಕೇಂದ್ರದ ಡಾ. ಶೋಭಿತ್ ಶೆಟ್ಟಿ ರಾಷ್ಟ್ರೀಯ ಚೆಸ್ ತೀರ್ಪುಗಾರ ಸಾಕ್ಷತ್ ನಡೆಸಿಕೊಟ್ಟರು.
ಕಾರ್ಯಕ್ರಮವನ್ನು ಉಡುಪಿ ತಾಲೂಕಿನ ಅಧ್ಯಕ್ಷರಾದ ವರದರಾಜ್ ನಿರೂಪಿಸಿದರು. ಕುಂದಾಪುರ ತಾಲೂಕು ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಉದಯ ಮಡಿವಾಳ ಎಂ. ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಬೈಂದೂರು ತಾಲೂಕು ಅಧ್ಯಕ್ಷರಾದ ಮಂಜುನಾಥ್ ಶೆಟ್ಟಿ ವಂದಿಸಿದರು.











