ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ವೃತ್ತಿ ಮತ್ತು ಕೌಶಲ್ಯ ಆಧಾರಿತ ಕೋರ್ಸ್ ಪ್ರಾರಂಭಿಸಬೇಕೆನ್ನುವ ಬೇಡಿಕೆಗೆ ಅನುಗುಣವಾಗಿ, ಕಾನೂನು ಶಿಕ್ಷಣಕ್ಕೆ ಹೆಚ್ಚಿನ ಬೇಡಿಕೆ ಇರುವುದನ್ನು ಮನಗಂಡು ಕುಂದಾಪುರದ ಪೋರ್ಟ್ ಗೇಟ್ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ಕುಂದಾಪುರದಲ್ಲಿ ಓಕ್‍ವುಡ್ ಕಾನೂನು ವಿದ್ಯಾಲಯ ಆರಂಭಿಸಲಾಗುತ್ತಿದೆ. ಸೆಪ್ಟೆಂಬರ್ ಅಂತ್ಯದಲ್ಲಿ ಓಕ್‍ವುಡ್ ಕಾನೂನು ವಿದ್ಯಾಲಯ ಲೋಕಾರ್ಪಣೆಗೊಳ್ಳಲಿದ್ದು, ದಾಖಲಾತಿ ಆರಂಭಗೊಂಡಿದೆ ಎಂದು ಪೋರ್ಟ್ ಗೇಟ್ ಎಜ್ಯುಕೇಶನ್ ಟ್ರಸ್ಟ್‍ನ ಆಡಳಿತ ಟ್ರಸ್ಟಿ ಅಭಿನಂದ ಎ.ಶೆಟ್ಟಿ ಹೇಳಿದರು.
ಕುಂದಾಪುರದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟ್ರಸ್ಟ್‌ನ ವತಿಯಿಂದ ನೂತನವಾಗಿ ಆರಂಭವಾಗುತ್ತಿರುವ ಓಕ್‍ವುಡ್ ಕಾನೂನು ವಿದ್ಯಾಲಯ ಉಡುಪಿ ಜಿಲ್ಲೆಯ ಎರಡನೆಯ ಕಾನೂನು ವಿದ್ಯಾಲಯವಾಗಿದ್ದು, ಕುಂದಾಪುರ, ಬೈಂದೂರು, ಉತ್ತರ ಕನ್ನಡ ಜಿಲ್ಲೆಯ ಮತ್ತು ಮಲೆನಾಡಿನ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ. 2025-26ನೇ ಸಾಲಿನ ಆರಂಭದಲ್ಲಿ ಮೂರು ವರ್ಷದ ಎಲ್. ಎಲ್. ಬಿ. ಕೋರ್ಸ್ ಆರಂಭವಾಗಲಿದ್ದು, 60 ಸೀಟುಗಳೊಂದಿಗೆ ಪ್ರಾರಂಭಿಸಲು ಅನುಮತಿ ದೊರೆತಿದೆ ಮುಂದಿನ ವರ್ಷ ಐದು ವರ್ಷದ ಕೋರ್ಸ್ ಆರಂಭಿಸಲಿದ್ದೇವೆ. ಇದಕ್ಕೆ ಕರ್ನಾಟಕ ರಾಜ್ಯದ ಕಾನೂನು ವಿಶ್ವವಿದ್ಯಾಲಯದಿಂದ ಅನುಮತಿ ಲಭಿಸಿದ್ದು, ಕರ್ನಾಟಕ ಸರ್ಕಾರದ ಅನುಮೋದನೆಯೊಂದಿಗೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ನವದೆಹಲಿ ಇದರ ಮಾನ್ಯತೆಯೂ ದೊರೆತಿದೆ ಎಂದು ಅವರು ಹೇಳಿದರು.
ಗುಣಮಟ್ಟದ ಕಾನೂನು ಶಿಕ್ಷಣ ಮತ್ತು ವಕೀಲ ವೃತ್ತಿಗೆ ಬೇಕಾದ ಪೂರಕ ತರಬೇತಿಯನ್ನು ನೀಡುವ ಉದ್ದೇಶ ಹೊಂದಲಾಗಿದ್ದು, ದೂರದ ವಿಧ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ನುರಿತ ಶಿಕ್ಷಕರನ್ನು ವಿಶ್ವವಿದ್ಯಾನಿಲಯ ನಿಯಮಾನುಸಾರ ಆಯ್ಕೆ ಮಾಡಿಕೊಂಡಿದ್ದು, ಅತಿಥಿ ಉಪನ್ಯಾಸಕರನ್ನು ಹಾಗೂ ವಿಶೇಷ ತರಬೇತಿಗಾರರನ್ನು ಗುರುತಿಸಿದೆ. ಸುಸಜ್ಜಿತ ಕ್ಲಾಸ್ ರೂಮ್‍ಗಳನ್ನು, ಮೂಟ್ ಕೋರ್ಟ್, ಅತ್ಯಾಧುನಿಕ ಗ್ರಂಥಾಲಯ, ಸೆಮಿನಾರ್ ಹಾಲ್‍ಗಳನ್ನು ಸಜ್ಜುಗೊಳಿಸಲಾಗಿದೆ. ಪಠ್ಯ ಹಾಗೂ ಪಠೇತರ ಚಟುವಟಿಕೆಗಳಿಗೆ ವಿಶೇಷ ಗಮನ ನೀಡಲಿದ್ದು ಶೀಘ್ರದಲ್ಲಿಯೇ ಸುಸಜ್ಜಿತ ಕ್ಯಾಂಪಸ್‍ನಲ್ಲಿ ಓಕ್‍ವುಡ್ ಕಾನೂನು ವಿದ್ಯಾಲಯವನ್ನು ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.
ಪೋರ್ಟ್ ಗೇಟ್ ಎಜ್ಯುಕೇಶನ್ ಟ್ರಸ್ಟ್ 2012ರಿಂದ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿದ್ದು ಕುಂದಾಪುರ ಪರಿಸರದಲ್ಲಿ ಯುರೋ ಕಿಡ್ಸ್ ಇಂಟರ್ ನ್ಯಾಷನಲ್ ಪ್ರಿ ಸ್ಕೂಲ್ ಹಾಗೂ ಓಕ್‍ವುಡ್ ಇಂಡಿಯನ್ ಸ್ಕೂಲ್ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದು ಸಿಬಿಎಸ್‍ಸಿ ಶಿಕ್ಷಣವನ್ನು ನೀಡುತ್ತಿದೆ. ಕಳೆದ ಎರಡು ಸಾಲಿನಲ್ಲಿ ಶೇ.100 ರಷ್ಟು ಪ್ರಥಮದರ್ಜೆ ಫಲಿತಾಂಶವನ್ನು ನೀಡಿದೆ. ಸಂಸ್ಥೆಯಲ್ಲಿ ಮಕ್ಕಳ ಸಂಖ್ಯೆಗಿಂತ ಹೆಚ್ಚಾಗಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಪ್ರಸ್ತುತ ಸುಮಾರು 600 ವಿದ್ಯಾರ್ಥಿಗಳು ಶಾಲೆಯಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ ಎಂದರು.
ಟ್ರಸ್ಟ್‌ನ ಕಾರ್ಯದರ್ಶಿ ನೀತಾ ಎ. ಶೆಟ್ಟಿ, ಟ್ರಸ್ಟಿಗಳಾದ ಬಿ. ಅರುಣ್ ಕುಮಾರ್ ಶೆಟ್ಟಿ, ಬಿಪಿಸಿಎಲ್ ನಿವೃತ್ತ ಜನರಲ್ ಮ್ಯಾನೇಜರ್ ದಿನಕರ್ ತೋನ್ಸೆ, ಆಡಳಿತ ಅಧಿಕಾರಿ ಸಹನಾ ಶೆಟ್ಟಿ ಹಾಗೂ ಪ್ರಾಂಶುಪಾಲೆ ಶ್ರುತಿ ಹೆಗ್ಡೆ ಉಪಸ್ಥಿತರಿದ್ದರು.











