ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್ ರಿ. ದ.ಕ-ಉಡುಪಿ ಜಿಲ್ಲೆ, ಬ್ರಹ್ಮಾವರ ವಲಯ ಇದರ ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮ ಜ.೧೧ರಂದು ಬ್ರಹ್ಮಾವರ ಮದರ್ ಪ್ಯಾಲೇಸ್ ಸಭಾಂಗಣದಲ್ಲಿ ಜರಗಿತು.

ಉದ್ಯಮಿ ಭರತ್ ಕುಮಾರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಯಾವುದೇ ಕ್ಷೇತ್ರಕ್ಕೆ ಸಾಮಾಜಿಕ ಮನ್ನಣೆ ಸಿಗಬೇಕಾದರೆ ಸಂಘಟನೆ ಅತೀ ಅಗತ್ಯ. ಪ್ರಸ್ತುತ ಕೋವಿಡ್‌ನ ಕಾಲಘಟ್ಟದಲ್ಲಿ ಕಾರ್ಯಕ್ರಮ ಸಂಯೋಜಕರ ಸಂಘಟನೆಗಳೆಲ್ಲರೂ ಒಟ್ಟಾಗಿ ಸರಕಾರದ ಗಮನಸೆಳೆಯಬೇಕಾದ ಅಗತ್ಯತೆ, ಅನಿವಾರ್‍ಯತೆ ಇದೆ ಎಂದರು.
ಪೈಪೋಟಿ ಪೂರಕವಾಗಿರಲಿ:-
ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಪ್ರಭಾರ ಪ್ರಧಾನ ಕಾರ್ಯದರ್ಶಿ ರಾಜೇಶ ಗಾಣಿಗ ಅಚ್ಲಾಡಿ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಇಂದು ಎಲ್ಲಾ ಕ್ಷೇತ್ರಗಳು ಪೈಪೋಟಿಯ ಕಾರಣಕ್ಕೆ ನಷ್ಟ ಹೆಚ್ಚುತ್ತಿದೆ. ಪೈಪೋಟಿ ಎನ್ನುವಂತದ್ದು ವೃತ್ತಿ ಕ್ಷೇತ್ರಕ್ಕೆ ಪೂರಕವಾಗಿರಬೇಕು ಹೊರತು ಮಾರಕವಾಗಬಾರದು. ನಿರಂತರ ಪ್ರಯೋಗಶೀಲತೆ ಹಾಗೂ ಬದಲಾವಣೆಗೆ ಒಗ್ಗಿಕೊಳ್ಳುವುದರಿಂದ ಫೋಟೋಗ್ರಫಿ ಕ್ಷೇತ್ರದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದರು.
ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್ ಮಾತೃಸಂಘದ ಅಧ್ಯಕ್ಷ ಆನಂದ್ ಎನ್ ಬಂಟ್ವಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು
ಪದಪ್ರದಾನ :-
ಈ ಸಂದರ್ಭ ಸಂಘದ ನೂತನ ಅಧ್ಯಕ್ಷರಾಗಿ ಪ್ರಕಾಶ್ ಜತ್ತನ್, ಪ್ರಧಾನ ಕಾರ್ಯದರ್ಶಿಯಾಗಿ ಜಾನ್ ಲೋಬೋ ಹಾಗೂ ಖಜಾಂಚಿಯಾಗಿ ಹರೀಶ್ ತೆಕ್ಕಟ್ಟೆ ಅಽಕಾರ ಸ್ವೀಕರಿಸಿದರು. ನಿವೃತ್ತ ಯೋಧರಾದ ಸತೀಶ್ ಕುಮಾರ್, ನಾಗೇಶ್ ಪೂಜಾರಿ ಅವರನ್ನು ವಿಶೇಷವಾಗಿ ಗೌರವಿಸಲಾಯಿತು ಹಾಗೂ ಕೊಂಕಣಿ ಹಾಸ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಅಲ್ವಿನ್ ಅಂದ್ರಾದೆ, ಸುಜಾತ ಅಂದ್ರಾದೆ ಮತ್ತು ಸ್ವಾಭಿಮಾನಿ ಹಿರಿಯ ನಾಗರಿಕರಾದ ಸದಾನಂದ ನಾಯಕ್, ಪೂರ್ಣಿಮಾ ನಾಯಕ್ ದಂಪತಿಗಳನ್ನು ಸಮ್ಮಾನಿಸಲಾಯಿತು. ಮಾತೃ ಸಂಘಟನೆಯ ನೂತನ ಪದಾಧಿಕಾರಿಗಳನ್ನು ಗೌರವಿಸಲಾಯಿತು.
ಅಸೋಸಿಯೇಶನ್ ಸಂಚಾಲಕರಾದ ನವೀನ್ ಕೊದ್ರೋಳಿ, ಎಸ್.ಕೆ.ಪಿ.ಎ. ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಾಸುದೇವ ರಾವ್, ಪ್ರಧಾನ ಕಾರ್ಯದರ್ಶಿ ನಿತಿನ್ ಬೆಳುವಾಯಿ, ನಿರ್ದೇಶಕ ಸ್ಟೀಪಿನ್ ಲೂವಿಸ್, ಎಸ್.ಕೆ.ಪಿ.ಎ. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೆರಿಕ್ ಡಿ’ಸೋಜ, ಬ್ರಹ್ಮಾವರ ವಲಯದ ಗೌರವಾಧ್ಯಕ್ಷ ಮಾಷಲ್ ಡಿ’ ಸೋಜ, ಜಿಲ್ಲಾ ಸಂಘದ ಪದ್ಮಪ್ರಸಾದ್ ಜೈನ್, ಬ್ರಹ್ಮಾವರ ಸಂಘಟನೆಯ ಮಾಜಿ ಕಾರ್ಯದರ್ಶಿ ಶರತ್ ಕೊಕ್ಕರ್ಣೆ ಮುಂತಾದವರು ಉಪಸ್ಥಿತರಿದ್ದರು.
ಬ್ರಹ್ಮಾವರ ಸಂಘದ ನಿರ್ಗಮಿತ ಅಧ್ಯಕ್ಷ ಹೆರಿಕ್ ಡಿ’ ಸೋಜ ಸ್ವಾಗತಿಸಿ, ಸುನಿಲ್ ಪಾಂಡೇಶ್ವರ ಕಾರ್ಯಕ್ರಮ ನಿರೂಪಿಸಿ, ಜಾನ್ ಲೋಬೋ ವಂದಿಸಿದರು.











