ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಸಂತ ಜೋಸೆಫ್ ವಾಜ್ ರವರಿಗೆ ಸಮರ್ಪಿತ ಉಡುಪಿ ಧರ್ಮ ಪ್ರಾಂತ್ಯದ ಏಕೈಕ ಪ್ರಾರ್ಥನಾಲಯ ವಾಗಿರುವ ಕುಂದಾಪುರ ತಾಲೂಕಿನ ಹೆಮ್ಮಾಡಿ ಗ್ರಾಮದ ಕನ್ನಡಕುದ್ರು ವಿನಲ್ಲಿರುವ ಸಂತ ಜೋಸೆಫ್ ವಾಜ್ ಪ್ರಾರ್ಥನಾಲಯದಲ್ಲಿ ಜನವರಿ 16 ರಂದು ಸಂತ ಜೋಸೆಫ್ ವಾಜ್ ರವರ ವಾರ್ಷಿಕ ಮಹೋತ್ಸವ ಸಂಭ್ರಮ ಸಡಗರದಿಂದ ಜರುಗಿತು.
ಗಂಗೊಳ್ಳಿ ಕೊಸೆಸಾಂವ್ ಮಾತೆಯ ಚರ್ಚಿನ ಧರ್ಮಗುರುಗಳಾದ ವಂದನೀಯ ತೋಮಸ್ ರೋಶನ್ ಡಿಸೋಜರವರ ಮುಂದಾಳತ್ವದಲ್ಲಿ ಜರುಗಿದ ವಾರ್ಷಿಕ ಮಹೋತ್ಸವದ ಪ್ರಧಾನ ಧರ್ಮಗುರುಗಳಾಗಿ ಉಡುಪಿ ಧರ್ಮ ಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಹಾಗೂ ಸಂತ ಅನ್ನಾ ಚರ್ಚ್, ತೊಟ್ಟಂ ನ ಧರ್ಮಗುರುಗಳಾದ ಅತಿ ವಂದನೀಯ ಡೆನಿಸ್ ಡೆಸಾ ರವರು ಭಾಗವಹಿಸಿ ಪವಿತ್ರ ಬಲಿಪೂಜೆಯನ್ನು ಅರ್ಪಿಸಿ, ತಮ್ಮ ಬೋಧನ ಸಂದೇಶದಲ್ಲಿ ” ಗಂಗೊಳ್ಳಿಯ ಪಂಚ ನದಿಗಳ ಸಂಗಮದಲ್ಲಿರುವ ಈ ಕನ್ನಡಕುದ್ರು, ಒಂದು ಪುಣ್ಯ ಭೂಮಿ. 14 ಜನವರಿ 2015 ರಂದು ಕ್ರೈಸ್ತ ಜಗದ್ಗುರು ಪೋಪ್ ಫ್ರಾನ್ಸಿಸ್ (ಈಗ ದೈವಾಧಿನರು) ರವರಿಂದ ಸಂತ ಪದವಿಗೇರಿದ ಸಂತ ಜೋಸೆಫ್ ವಾಜ್ ರವರು ನಡೆದಾಡಿದ, ಸೇವೆ ಸಲ್ಲಿಸಿದ ಪುಣ್ಯಕ್ಷೇತ್ರ ಕನ್ನಡಕುದ್ರು. “ಬಡವಬಲ್ಲಿದರ ಪ್ರೀತಿಯ ಸೇವೆಯಲ್ಲಿ, ಯೇಸುಕ್ರಿಸ್ತ ಸಾಕ್ಷಿಗಳಾಗೋಣ ” ಎನ್ನುವ ಧ್ಯೇಯ ವಾಕ್ಯದೊಂದಿಗೆ ಆಚರಿಸುವ ಈ ವರ್ಷದ ವಾರ್ಷಿಕ ಹಬ್ಬದಲ್ಲಿ ನಾವು ” ಸ್ವರ್ಗಕ್ಕೆ ದಾರಿ ನೆರೆಮನೆಯವರ ಅಂಗಣದಿಂದ” ಎನ್ನುವುದನ್ನು ಮನಸ್ಸಿನಲ್ಲಿಟ್ಟು ಇತರರ ಸೇವೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳೊಣ. ಬಡವರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಸಂತ ಜೋಸೆಫ್ ವಾಜ್ ರವರು ನಮಗೆ ಆದರ್ಶಪ್ರಾಯರು. ಉಡುಪಿ ಧರ್ಮಪ್ರಾಂತ್ಯ ಘೋಷಿಸಿರುವ 2026 “ಬಡವರ ವರ್ಷ”ದಲ್ಲಿ ಅಗತ್ಯಳ್ಳವರೊಂದಿಗೆ ನಾವು ಚರ್ಚ್ ಕಂಪೌಂಡ್ ಹೊರಗಡೆ ಪ್ರೀತಿಯಿಂದ ಸೇವೆ ನೀಡಿ, ಅವರ ಕಷ್ಟಗಳಿಗೆ ಸ್ವಂದಿಸಿ ಮುಕ್ತಿಯನ್ನು ಪಡೆಯೋಣ” ಎಂದು ಹೇಳಿದರು.
ಕುಂದಾಪುರ ವಲಯದ ಪ್ರಧಾನ ಧರ್ಮಗುರುಗಳಾದ ಅತಿ ವಂದನಿಯ ಪೌಲ್ ರೇಗೊ ರವನ್ನು ಒಳಗೊಂಡಂತೆ ಹಲವಾರು ಧರ್ಮಗುರುಗಳು ದಿವ್ಯ ಬಲಿಪೂಜೆಯಲ್ಲಿ ಭಾಗವಹಿಸಿದ್ದರು.
ಲೊಯ್ಡ್ ರೆವೆರೊ ರವರ ನೇತೃತ್ವದಲ್ಲಿ ಗಂಗೊಳ್ಳಿ ಚರ್ಚಿನ ಗಾಯನ ಮಂಡಳಿಯವರು ಹಾಗೂ ಗಂಗೊಳ್ಳಿ ಕಾರ್ಮೆಲ್ ಕಾನ್ವೆಂಟ್ ನ ಧರ್ಮಭಗಿನಿಯವರು ದಿವ್ಯ ಬಲಿಪೂಜೆಯ ಸಂಭ್ರಮಕ್ಕೆ ಸಹಕಾರ ನೀಡಿದರು.
ಗಂಗೊಳ್ಳಿ ಕೊಸೆಸಾಂವ್ ಮಾತೆಯ ಚರ್ಚಿನ ಅಧೀನದಲ್ಲಿರುವ ಕನ್ನಡಕುದ್ರು ಸಂತ ಜೋಸೆಫ್ ವಾಜ್ ಪ್ರಾರ್ಥನಾಲಯದಲ್ಲಿ ಜರುಗಿದ ಈ ವಾರ್ಷಿಕ ಮಹೋತ್ಸವದ ಪ್ರಧಾನ ಪೋಷಕರಾಗಿ ಬ್ರಹ್ಮಾವರ ಸಾಲಿಕೇರಿಯ ಹಾಗೂ ಜೋಸೆಫ್ ಪ್ರೇಮಿ ಡಿ ಅಲ್ಮೇಡಾ ಹಾಗೂ ಕುಟುಂಬದವರು ವಹಿಸಿದ್ದರು.
ಕುಂದಾಪುರ ವಲಯದ ಪ್ರಧಾನ ಧರ್ಮಗುರುಗಳಾದ ಅತಿ ವಂದನೀಯ ಪೌಲ್ ರೇಗೊರವರು ಸರ್ವರಿಗೂ ಸಂತ ಜೋಸೆಫ್ ವಾಜ್ ರವರ ಹಬ್ಬದ ಶುಭಾಶಯಗಳನ್ನು ಕೋರಿದರು. ಗಂಗೊಳ್ಳಿ ಕೊಸೆಸಾಂವ್ ಮಾತೆ ಚರ್ಚಿನ ಧರ್ಮ ಗುರುಗಳಾದ ವಂದನೀಯ ತೋಮಸ್ ರೋಶನ್ ಡಿಸೋಜರವರು ಸರ್ವರಿಗೂ ವಾರ್ಷಿಕ ಮಹೋತ್ಸವದ ಶುಭಾಶಯಗಳನ್ನು ನೀಡಿ, ಮಹೋತ್ಸವದ ಯಶಸ್ಸಿಗೆ ಶ್ರಮಿಸಿದ ಸರ್ವರಿಗೂ ಅಧಿನಂದನೆಗಳನ್ನು ಅರ್ಪಿಸಿದರು.
ವಾರ್ಷಿಕ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ದಿನಾಂಕ 13,14,15 ಜನವರಿ 2026ರಂದು ದಿವ್ಯ ಆರಾಧನೆ, ನೊವೆನಾ ಹಾಗೂ ಬಲಿಪೂಜೆ ಯನ್ನು ತಲ್ಲೂರು ಸಂತ ಪ್ರಾನ್ಸಿಸ್ ಆಸಿಸ್ಸಿ ಚರ್ಚಿನ ಧರ್ಮ ಗುರುಗಳಾದ ವಂದನೀಯ ಎಡ್ವಿನ್ ಡಿಸೋಜ , ಕೆರೆಕಟ್ಟೆ ಸಂತ ಅಂತೋನಿಯವರ ಪುಣ್ಯಕ್ಷೇತ್ರದ ರೆಕ್ಟರ್ ಅತಿ ವಂದನೀಯ ಸುನಿಲ್ ವೇಗಸ್ ಹಾಗೂ ಬೈಂದೂರು ಪವಿತ್ರ ಶಿಲುಬೆ ಚರ್ಚಿನ ಸಹಾಯಕ ಧರ್ಮಗುರುಗಳಾದ ವಂದನೀಯ ಪ್ರಥ್ವಿ ರೊಡ್ರಿಗಸ್ ರವರು ಬಹು ಯಶಸ್ವಿಯಾಗಿ ನೆರವೇರಿಸಿದರು.
ದಿವ್ಯ ಬಲಿಪೂಜೆಯ ನಂತರ ಸರ್ವರಿಗೂ ಸಹ ಭೋಜನದ ವ್ಯವಸ್ಥೆ ಮಾಡಲಾಗಿತ್ತು.











