ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ:ಎಳೆ ವಯಸ್ಸಿನಲ್ಲೆ ಯಕ್ಷ ಅಭಿರುಚಿಯನ್ನು ಬೆಳೆಸಬೇಕು ಆಗ ಮಾತ್ರ ಕರಾವಳಿಯ ಗಂಡು ಕಲೆ ಉಳಿಸಿ ಬೆಳೆಸಲು ಸಾಧ್ಯ. ಈ ನಿಟ್ಟಿನಲ್ಲಿ ಯಕ್ಷಾಮೃತ ಸಹಕಾರಿಯಾಗಲಿದೆ ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದರು.
ಕೋಟದ ಗಿಳಿಯಾರು ಅಲ್ಸೆಕೆರೆ ಮಹಾಲಿಂಗೇಶ್ವರ ದೇಗುಲದಲ್ಲಿ ಯಕ್ಷಾಮೃತ ಟ್ರಸ್ಟ್ ಗಿಳಿಯಾರು ಚಿಣ್ಣರ ಕಲಾವಿಹಾರ ಲೋಕಾರ್ಪಣೆಗೊಳಿಸಿ ಮಾತನಾಡಿ ಯಕ್ಷಗಾನವನ್ನು ಉಳಿಸಿ ಬೆಳೆಸುವಲ್ಲಿ ವಿಶ್ವವಿಖ್ಯಾತ ಮಕ್ಕಳ ಮೇಳ ಸಾಲಿಗ್ರಾಮ ಇವರ ಪಾತ್ರ ಮಹತ್ವವಾದದ್ದು. ಅದೇ ರೀತಿ ಯಕ್ಷಾಮೃತ ಟ್ರಸ್ಟ್ ಮಹತ್ತರ ಮೈಲಿಗಲ್ಲು ಸಾಧಿಸಲಿ. ಒಂದಿಷ್ಟು ಆಸಕ್ತ ಮನಸ್ಸುಗಳಿಗೆ ವೇದಿಕೆ ಕಲ್ಪಿಸಲಿ ಎಂದು ಹಾರೈಸಿದರು.
ಸಭೆಯಲ್ಲಿ ಯಕ್ಷಾಮೃತ ಲೋಗೊ ಅನ್ನು ಕಲಾ ಸಾಹಿತಿ ಜನಾರ್ದನ ಹಂದೆ ಅನಾವರಣಗೊಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಯಕ್ಷಾಮೃತ ಟ್ರಸ್ಟ್ ಅಧ್ಯಕ್ಷ ಹಂಡಿಕೆರೆ ರಾಘವೇಂದ್ರ ಶೆಟ್ಟಿ ವಹಿಸಿದ್ದರು.
ಯಕ್ಷಗುರು ಪ್ರಸಾದ್ ಕುಮಾರ ಮೊಗೆಬೆಟ್ಟು ಶುಭಾಶಂಸನೆಗೈದರು.
ಮುಖ್ಯ ಅಭ್ಯಾಗತರಾಗಿ ಕೋಟ ಸಹಕಾರಿ ವ್ಯವಸಾಯಕ ಸಂಘದ ನಿರ್ದೇಶಕ ಜಿ.ತಿಮ್ಮ ಪೂಜಾರಿ, ಕೋಟ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ, ಯಕ್ಷಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗದ ಅಧ್ಯಕ್ಷ ಗಿರೀಶ್ ಗಾಣಿಗ ಬೆಟ್ಲಕ್ಕಿ, ಭರತನಾಟ್ಯ ಕಲಾವಿದೆ ಪೂಜಾ ಚಿತ್ರಪಾಡಿ, ಭಜನಾ ಗುರು ಪ್ರಶಾಂತ್ ಪೂಜಾರಿ ಪಡುಕರೆ ಉಪಸ್ಥಿತರಿದ್ದರು.
ಯಕ್ಷಾಮೃತ ಟ್ರಸ್ಟ್ ನ ಹರೀಷ್ ಭಂಡಾರಿ ಸ್ವಾಗತಿಸಿದರು. ಕಲಾವಿದೆ ನಾಗರತ್ನ ಹೇರ್ಳೆ ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಮಂಜುನಾಥ್ ಆಚಾರ್ ನಿರೂಪಿಸಿದರು.











