ಮಲೆನಾಡು ಮತ್ತು ಕರಾವಳಿ ರೈಲ್ವೆ ಕ್ರಾಂತಿಗೆ ಸಂಸತ್ತಿನಲ್ಲಿ ಮೊಳಗಿದ ‘ಬಿ.ವೈ.ಆರ್’ ಧ್ವನಿ; ಹಲವಾರು ಪ್ರಮುಖ ರೈಲ್ವೆ ಯೋಜನೆಗಳನ್ನು ಶೀಘ್ರ ಅನುಷ್ಠಾನಕ್ಕೆ ಸಂಸದ ಬಿ.ವೈ.ರಾಘವೇಂದ್ರರ ಪ್ರಬಲ ಒತ್ತಾಯ

0
475

Click Here

Click Here

ಪ್ರಯಾಣಿಕರ ಅನುಕೂಲತೆಗಾಗಿ ಬೈಂದೂರು ರೈಲು ನಿಲ್ದಾಣದಲ್ಲಿ ನಾಲ್ಕು ಎಕ್ಸ್‌ಪ್ರೆಸ್ ರೈಲುಗಳಿಗೆ ನಿಲುಗಡೆ ನೀಡುವಂತೆ ಒತ್ತಾಯ; ಶಿವಮೊಗ್ಗ – ತೀರ್ಥಹಳ್ಳಿ – ಮಂಗಳೂರು ರೈಲ್ವೆ ಸಂಪರ್ಕಕ್ಕೆ ಧ್ವನಿ ಎತ್ತಿದ ಬಿ.ವೈ.ರಾಘವೇಂದ್ರ

ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ ಕರ್ನಾಟಕದ ರೈಲ್ವೆ ಯೋಜನೆಗಳಿಗೆ 7,748 ಕೋಟಿ ರೂ. ಅನುದಾನಕ್ಕೆ ಕೃತಜ್ಞತೆ; ಲೋಕಸಭೆಯಲ್ಲಿ ರೈಲ್ವೆಗೆ ಅನುದಾನದ ಬೇಡಿಕೆಗಳ ಕುರಿತಂತೆ ಅಧಿವೇಶನದಲ್ಲಿ ಸಂಸದರ ಭಾಷಣ

ನವದೆಹಲಿ :ಕೇಂದ್ರ ಬಜೆಟ್ 2026-27ರ ರೈಲ್ವೆ ಅನುದಾನ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಿವಮೊಗ್ಗದ ಸಂಸದ ಬಿ.ವೈ. ರಾಘವೇಂದ್ರ, ಶಿವಮೊಗ್ಗ ಹಾಗೂ ಮಲೆನಾಡು ಭಾಗದ ದಶಕಗಳ ರೈಲ್ವೆ ಕನಸುಗಳನ್ನು ನನಸಾಗಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ಮತ್ತೊಮ್ಮೆ ಕ್ಷೇತ್ರದ ಅಭಿವೃದ್ಧಿಗಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ‘ವಿಳಂಬ ಗತಿಯಿಂದ, ಅತಿ ವೇಗದ ವಿತರಣೆಯ’ ಯುಗಕ್ಕೆ ಕಾಲಿಟ್ಟಿದೆ ಎಂದು ಶ್ಲಾಘಿಸಿದ ಸಂಸದರು, ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಈ ಬಾರಿ ದಾಖಲೆಯ 7,748 ಕೋಟಿ ರೂ. ಅನುದಾನ ನೀಡಿದ್ದಕ್ಕಾಗಿ ಮೋದಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಹಿಂದಿನ ಯುಪಿಎ ಸರ್ಕಾರಕ್ಕೆ ಹೋಲಿಸಿದರೆ ಕರ್ನಾಟಕಕ್ಕೆ ಸಿಗುತ್ತಿರುವ ರೈಲ್ವೆ ಅನುದಾನದಲ್ಲಿ ಒಂಬತ್ತು ಪಟ್ಟು ಹೆಚ್ಚಳವಾಗಿದೆ ಎಂದು ಅವರು ಅಂಕಿ-ಅಂಶಗಳ ಸಮೇತ ವಿವರಿಸಿದರು.

ಪ್ರಮುಖವಾಗಿ, ಶಿವಮೊಗ್ಗ-ತೀರ್ಥಹಳ್ಳಿ-ಶೃಂಗೇರಿ-ಮಂಗಳೂರು ಮಾರ್ಗದ ಶೀಘ್ರ ಅನುಷ್ಠಾನ ಹಾಗೂ ಬೈಂದೂರಿಗೆ ಸಂಬಂಧಪಟ್ಟಂತೆ ಪ್ರಯಾಣಿಕರ ಅನುಕೂಲತೆ ಹೆಚ್ಚಿಸುವ ಬದ್ಧತೆಯ ಭಾಗವಾಗಿ, ಸಂಸದರು ಮೂಕಾಂಬಿಕಾ ರಸ್ತೆ ಬೈಂದೂರು ರೈಲು ನಿಲ್ದಾಣದಲ್ಲಿ ಎರ್ನಾಕುಲಂ-ಪುಣೆ ಎಕ್ಸ್ ಪ್ರೆಸ್, ತಿರುವನಂತಪುರಂ-ನಿಜಾಮುದ್ದೀನ್ ಎಕ್ಸ್ ಪ್ರೆಸ್, ಕೊಚಿವೇಲಿ-ಹೃಷೀಕೇಶ್ ಎಕ್ಸ್ ಪ್ರೆಸ್, ಮಂಗಳ ಲಕ್ಷದ್ವೀಪ್ ಎಕ್ಸ್ ಪ್ರೆಸ್ – ಈ ನಾಲ್ಕು ಎಕ್ಸ್‌ಪ್ರೆಸ್ ರೈಲುಗಳಿಗೆ ನಿಲುಗಡೆ ಒದಗಿಸುವಂತೆ ಸಂಸದ ರಾಘವೇಂದ್ರ ಸಚಿವಾಲಯವನ್ನು ವಿನಂತಿಸಿದರು. ಬೈಂದೂರು ಒಳಗೊಂಡಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಪ್ರಮುಖ ರೈಲ್ವೆ ಸಂಪರ್ಕ ಕೇಂದ್ರವನ್ನಾಗಿ (Transit Hub) ಪರಿವರ್ತಿಸುವ ನಿಟ್ಟಿನಲ್ಲಿ ಸಂಸದರು ಹಲವು ಪ್ರಮುಖ ಯೋಜನೆಗಳ ಶೀಘ್ರ ಅನುಷ್ಠಾನಕ್ಕೆ ಸದನದಲ್ಲೇ ಹಾಜರಿದ್ದ ರೈಲ್ವೆ ಸಚಿವರನ್ನು ಒತ್ತಾಯಿಸಿದ್ದು ವಿಶೇಷವಾಗಿತ್ತು.

Click Here

ತೀರ್ಥಹಳ್ಳಿ, ಸೊರಬಕ್ಕೆ ರೈಲ್ವೆ ಸಂಪರ್ಕ ಯೋಜನೆಗಳ ಶೀಘ್ರ ಅನುಷ್ಠಾನಕ್ಕೆ ಒತ್ತಾಯ: ಮಲೆನಾಡಿನ ಸಾಂಸ್ಕೃತಿಕ ಕೇಂದ್ರ, ಕುವೆಂಪು ಜನ್ಮಭೂಮಿ ತೀರ್ಥಹಳ್ಳಿಗೆ ರೈಲು ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಶಿವಮೊಗ್ಗ-ತೀರ್ಥಹಳ್ಳಿ-ಶೃಂಗೇರಿ-ಮಂಗಳೂರು ಹಾಗೂ ಶಿವಮೊಗ್ಗ-ತೀರ್ಥಹಳ್ಳಿ-ಶೃಂಗೇರಿ-ಚಿಕ್ಕಮಗಳೂರು ರೈಲು ಮಾರ್ಗದ ಸಮೀಕ್ಷೆಯನ್ನು ವೇಗಗೊಳಿಸಲು ಸಂಸದರು ವಿನಂತಿಸಿದರು. ತಾಳಗುಪ್ಪ-ಸಿದ್ದಾಪುರ-ಶಿರಸಿ-ಹುಬ್ಬಳ್ಳಿ ಮಾರ್ಗವನ್ನು ಸೊರಬದ ಮೂಲಕವೇ ಹಾದುಹೋಗುವಂತೆ ಮಾಡುವ ಮೂಲಕ ಅರಣ್ಯ ನಾಶವನ್ನು ತಡೆಗಟ್ಟುವ ಮತ್ತು ಸೊರಬಕ್ಕೆ ರೈಲ್ವೆ ಸಂಪರ್ಕ ಕಲ್ಪಿಸುವ ಸಾರ್ವಜನಿಕರ ಬೇಡಿಕೆಯನ್ನು ಈಡೇರಿಸುವ ಮಹತ್ವಪೂರ್ಣ ಪ್ರಸ್ತಾಪವನ್ನು ರಾಘವೇಂದ್ರ ಮುಂದಿಟ್ಟರು.

ಮಲೆನಾಡು ಹಾಗೂ ಉತ್ತರ ಕರ್ನಾಟಕವನ್ನು ಸಂಪರ್ಕಿಸುವ ಶಿವಮೊಗ್ಗ–ಶಿಕಾರಿಪುರ–ರಾಣೆಬೆನ್ನೂರು ರೈಲ್ವೆ ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಮತ್ತು ಶಿಕಾರಿಪುರದಿಂದ ರಾಣೆಬೆನ್ನೂರು ವರೆಗಿನ ಎರಡನೇ ಹಂತದ ಕಾಮಗಾರಿಗೆ ಕೂಡಲೇ ಟೆಂಡರ್ ಕರೆಯುವಂತೆ ಮನವಿ ಮಾಡಿದರು. ಈ ಯೋಜನೆಯ ಸಾಕಾರಕ್ಕಾಗಿ ರಾಜ್ಯ ಸರ್ಕಾರದ ವತಿಯಿಂದ 50:50 ವೆಚ್ಚ ಹಂಚಿಕೆ ಹಾಗೂ ಭೂಸ್ವಾಧೀನ ಪ್ರಕ್ರಿಯೆಗೆ ಶ್ರಮಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕೊಡುಗೆಯನ್ನು ಸಂಸದರು ಇದೇ ವೇಳೆ ಸ್ಮರಿಸಿದರು. ಶಿವಮೊಗ್ಗದ ಕೋಟೆಗಂಗೂರು ಕೋಚಿಂಗ್ ಟರ್ಮಿನಲ್‌ನ ಎರಡನೇ ಹಂತದ ಕಾಮಗಾರಿಗೆ ತಕ್ಷಣದ ಅನುಮೋದನೆ ನೀಡಬೇಕು ಮತ್ತು ಎರಡನೇ ಪೂರ್ಣ ಪ್ರಮಾಣದ ಪಿಟ್ ಲೈನ್ ಹಾಗೂ ಸ್ವಯಂಚಾಲಿತ ಕೋಚ್ ವಾಷಿಂಗ್ ಪ್ಲಾಂಟ್ ಸ್ಥಾಪಿಸಬೇಕು ಎಂದು ಸಂಸದ ರಾಘವೇಂದ್ರ ಬಲವಾಗಿ ಪ್ರತಿಪಾದಿಸಿದರು. ಇವುಗಳ ಜೊತೆಗೆ ಶಿವಮೊಗ್ಗದಿಂದ ವಂದೇ ಭಾರತ್ ರೈಲುಗಳ ಕಾರ್ಯಾಚರಣೆ ಪ್ರಾರಂಭಿಸಲು ಈ ಟರ್ಮಿನಲ್ ಅಗತ್ಯವನ್ನು ಒತ್ತಿ ಹೇಳಿದ ಸಂಸದರು, ಇದರೊಂದಿಗೆ ಬೀರೂರು-ಶಿವಮೊಗ್ಗ ರೈಲ್ವೆ ಹಳಿ ಜೋಡಿ ಮಾರ್ಗ (Doubling) ಯೋಜನೆಗೆ ಕೂಡಲೇ ಆಡಳಿತಾತ್ಮಕ ಮಂಜೂರಾತಿ ನೀಡುವಂತೆ ಆಗ್ರಹಿಸಿದರು.

ಪ್ರಧಾನಿ ಮೋದಿಯವರ ‘ವಿಕಸಿತ ಭಾರತ’ ಸಂಕಲ್ಪಕ್ಕೆ ಪೂರಕವಾಗಿ ಶಿವಮೊಗ್ಗ ಕೂಡ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು, ಮುಂದಿನ ದಿನಗಳಲ್ಲೂ ಕೇಂದ್ರ ಸರ್ಕಾರದ ಸಹಕಾರ ಇದೇ ರೀತಿ ಮುಂದುವರಿಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

Click Here

LEAVE A REPLY

Please enter your comment!
Please enter your name here