ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಮಕ್ಕಳ ಸುರಕ್ಷತೆ ಎನ್ನುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಮಕ್ಕಳಿಗೆ ಪ್ರೀತಿ ತೋರಿಸುವುದರ ಮೂಲಕ ಅವರ ಸಮಸ್ಯೆಗಳನ್ನು ಆಲಿಸಿ ಶೀಘ್ರವಾಗಿ ಸ್ಪಂದಿಸಬೇಕು. ತಮ್ಮ ಸುತ್ತಮುತ್ತಲಿನ ಮಕ್ಕಳ ಮೇಲೆ ನಡೆಯುವ ಆನ್ಯಾಯ ಅಕ್ರಮಗಳನ್ನು ಗುರುತಿಸಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಈ ಗ್ರಾಮಸಭೆಯು ಮುಖ್ಯ ವೇದಿಕೆಯಾಗಿದೆ ಎಂದು ಕುಂದಾಪುರ ಪೊಲೀಸ್ ಠಾಣೆಯ ಎಎಸ್‍ಐ ಅಶೋಕ್ ಹೇಳಿದರು.


ಅವರು ಬೀಜಾಡಿ ಪಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಬೀಜಾಡಿ ಗ್ರಾಮ ಪಂಚಾಯತ್‍ನ 2022-23ನೇ ಸಾಲಿನ ಪ್ರಥಮ ಸುತ್ತಿನ ಮಹಿಳಾ ಮತ್ತು ಮಕ್ಕಳ ವಿಶೇಷ ಗ್ರಾಮಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ನೋಡೆಲ್ ಅಧಿಕಾರಿ ಕುಸುಮಾಕರ ಶೆಟ್ಟಿ, ಮಕ್ಕಳ ಮಿತ್ರ ಪ್ರಸನ್ನ ದೇವಾಡಿಗ, ಮಹಿಳಾ ಮಿತ್ರ ನಾಗರತ್ನ ಮಹಿಳೆ ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಮಾತನಾಡಿದರು.
ಬೀಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ವಿಜಯಕುಮಾರಿ, ಸದಸ್ಯರಾರ ವಾದಿರಾಜ್ ಹೆಬ್ಬಾರ್, ಮಂಜುನಾಥ್ ಕುಂದರ್, ಶೇಖರ ಚಾತ್ರಬೆಟ್ಟು, ಗುಲಾಬಿಯಮ್ಮ, ಪಟ್ಟು, ರಜಿನಿ ಜ್ಯೂಲಿ, ಪೂರ್ಣಿಮಾ, ಶಾಲಾ ಶಿಕ್ಷಕ ವರ್ಗ, ಅಂಗನವಾಡಿ ಮತ್ತು ಆರೋಗ್ಯ ಹಾಗೂ ಆಶಾ ಕಾರ್ಯಕರ್ತರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಶಾಲಾ ಮಕ್ಕಳ ಮುಖ್ಯಮಂತ್ರಿ ಸಮರ್ಥ, ಉಪಮುಖ್ಯಮಂತ್ರಿ ಸಿದ್ದಾರ್ಥ, ರೋಹಿತ್ ಮಕ್ಕಳ ಸಮಸ್ಯೆಗಳ ಬಗ್ಗೆ ಸಭೆಯ ಗಮನಕ್ಕೆ ತಂದರು. ಪಿಡಿಒ ಗಣೇಶ್ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ನಾರಾಯಣ ಬೀಜಾಡಿ ವಂದಿಸಿದರು.
ಗ್ರಾಮಸಭೆಯಲ್ಲಿ ಬಂದ ಮಕ್ಕಳ ದೂರುಗಳು:
ಬೀಜಾಡಿ ಸೀತಾಲಕ್ಷ್ಮೀ ಸರಕಾರಿ ಪ್ರೌಢಶಾಲೆ ಮತ್ತು ಬೀಜಾಡಿ ಪಡುಶಾಲೆಯಲ್ಲಿ ಕೊಠಡಿಗಳ ಬೇಡಿಕೆ.
ಮೂಡುಶಾಲೆಯಲ್ಲಿ ಮಕ್ಕಳಿಗೆ ಬೆಂಚಿನ ಕೊರತೆ.
ಬೀಜಾಡಿ ಸರಕಾರಿ ಪ್ರೌಢಶಾಲೆಯ ಮೈದಾನ ಸರಿಪಡಿಸುವಿಕೆ.
ಶಾಲೆಗೆ ಹೋಗುವ ರಸ್ತೆಗಳ ದುರಸ್ತಿಗೆ ಆಗ್ರಹ.
ದೊಡ್ಡೋಣಿ ಅಂಗನವಾಡಿ ಕಟ್ಟಡ ಸಮಸ್ಯೆ ಪರಿಹಾರಕ್ಕೆ ಕ್ರಮ.











