ಕುಂದಾಪುರ ಮಿರರ್ ಸುದ್ದಿ…
ಕೋಟ: ಪ್ರಸ್ತುತ ತಲೆಮಾರಿನ ಶ್ರೇಷ್ಠ ಶಿಕ್ಷಕರಲ್ಲಿ ಅಗ್ರ ಪಂಕ್ತಿಯಲ್ಲಿರುವ ರಾಮಚಂದ್ರ ಉಡುಪರಂತಹ ನೆನಪು ಮಾಡಿಕೊಳ್ಳುವುದರಿಂದ ಅವರಿಗೆ ಸಲ್ಲಿಸಬಹುದಾದ ಗೌರವವೂ ಇಂದಿನವರಿಗೆ ಆದರ್ಶವೂ ಏಕಕಾಲದಲ್ಲಿ ಆಗುವುದು ಖಚಿತ ಎಂದು ಉಡುಪ ನೂರು-ನೆನಪು ನೂರಾರು ಎಂಬ ಶತಮಾನೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿದ ಸಾಹಿತಿ ಪ್ರೋ.ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಹೇಳಿದರು.
ಇತ್ತೀಚಿಗೆ ಗುಂಡ್ಮಿ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರ ಇಲ್ಲಿ ಉಡುಪ ನೂರು-ನೆನಪು ನೂರಾರು ಎಂಬ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೋಟ ವಿದ್ಯಾಸಂಘದ ಅಧ್ಯಕ್ಷ ಪಿ. ಪಿ ಮಯ್ಯ ಉಡುಪರ ಸುಧೀರ್ಘ ಆಡಳಿತಾವಧಿಯಲ್ಲಿನ ಅವರ ಕರ್ತವ್ಯ ಪ್ರಜ್ಞೆ ಹಾಗೂ ಶೈಕ್ಷಣಿಕ ಬದ್ಧತೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಬೆಳಗೋಡು ರಮೇಶ ಭಟ್ಟರು ರಚಿಸಿದ ‘ಧೀ ವಿಕಾಸದ ಬೆಳಕು- ಕಾರ್ಕಡ ರಾಮಚಂದ್ರ ಉಡುಪರು’ ಎಂಬ ಕೃತಿಯನ್ನು ಬಿಡುಗಡೆಗೊಳಿಸಿ ಇದರಲ್ಲಿ ನಮಗೆ ತಿಳಿಯದ, ಮರೆತೇಹೋಗಿರುವ ಅನೇಕ ರಸಪ್ರಸಂಗಗಳಿಂದ ಓದಿಸಿಕೊಂಡು ಹೋಗುವ ಗುಣಯುತವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪರಿಸರದ ರಾಷ್ಟ್ರಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿರುವ ಶ್ರೀಧರ ಹಂದೆ, ಎಚ್. ಸೋಮಶೇಖರ ಶೆಟ್ಟಿ, ಸುರೇಶ ಮರಕಾಲ ಇವರನ್ನು ಸನ್ಮಾನಿಸಲಾಯಿತು.
ಉಡುಪರ ಸಹವರ್ತಿ ಸಹೋದ್ಯೋಗಿಗಳನ್ನೂ ಗೌರವಿಸಲಾಯಿತು. ಬೆಳಗೋಡು ರಮೇಶ ಭಟ್ಟರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರೆ, ಮಹಾಲಕ್ಷ್ಮಿ ಸೋಮಯಾಜಿ ಕಾರ್ಯಕ್ರಮವನ್ನು ನಿರೂಪಿಸಿದರು. ಮಂಜುನಾಥ ಉಪಾಧ್ಯಾಯರಿಂದ ವಂದನಾರ್ಪಣೆ, ಡಾ| ಚೈತ್ರ ಕಲ್ಕೂರರಿಂದ ರಂಗಗೀತೆಗಳ ಪ್ರಸ್ತುತಿ ನಡೆಯಿತು.











