ಬೆಳ್ವೆಯಲ್ಲಿ ಉಡುಪಿ ಜಿಲ್ಲಾ ರೈತ ಸಂಘದ ಸಭೆ
ಕುಂದಾಪುರ ಮಿರರ್ ಸುದ್ದಿ….
ಕುಂದಾಪುರ: ರಾಜ್ಯದಲ್ಲಿ ನಮ್ಮನ್ನಾಳುವ ಪಕ್ಷಗಳು ರೈತರ ಹಾಗೂ ಜನಸಾಮನ್ಯರ ಜೀವನದ ಮೇಲೆ ಬರೆ ಎಳೆದಿವೆ. ಕಾನೂನುಬದ್ಧವಾಗಿ ಸಿಗಬೇಕಾಗಿದ್ದ ಹಕ್ಕು ಹಾಗೂ ಸೌಲಭ್ಯಗಳನ್ನು ಕಸಿದುಕೊಂಡು ದ್ರೋಹ ಮಾಡುತ್ತಿವೆ. ಶಿಕ್ಷಣ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿವೆ. ಸರಕಾರ ಹಾಗೂ ಅಧಿಕಾರಿಗಳು ರೈತರ ಹಾಗೂ ಜನಸಾಮಾನ್ಯರ ಮೇಲೆ ಮಾಡುತ್ತಿರುವ ದಬ್ಬಾಳಿಕೆಯ ವಿರುದ್ಧ ತೀವೃ ಹೋರಾಟ ನಡೆಸಲಾಗುವುದು ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಹೇಳಿದರು.
ಅವರು ಬೆಳ್ವೆ ಸಂದೇಶ ಕಿಣಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್‍ನ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ರೈತ ಸಂಘದ ಸಭೆಯಲ್ಲಿ ಸರಕಾರ ಹಾಗೂ ಇಲಾಖೆಗಳಿಂದ ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದರು.
ಅಸಮರ್ಪಕವಾದ ವಾರಾಹಿ ಯೋಜನೆ: ವಾರಾಹಿ ನೀರಾವರಿ ಯೋಜನೆ ಮೂಲ ಉದ್ಧೇಶದ ಗುರಿಯನ್ನು ಸಮರ್ಪಕವಾಗಿ ನಿರ್ವಹಿಸದೇ ಅಧಿಕಾರಿಗಳು ರೈತರಿಗೆ ದ್ರೋಹ ಮಾಡುತ್ತಿದ್ದಾರೆ. ವಾರಾಹಿ ನೀರಾವರಿ ಯೋಜನೆಯ ಮೂಲದ ಹತ್ತಿರದ 10 ಗ್ರಾಮಗಳಿಗೆ ನೀರಿನ ಸಮಸ್ಯೆಗಳಿವೆ. ಅವುಗಳಲ್ಲಿ ನೀರಾವರಿ ಯೋಜನೆಗಳಿಗೆ ಸೇರ್ಪಡೆಗೊಳಿಸಲಾದ 2 ಗ್ರಾಮಗಳಿಗೆ ಈ ತನಕ ಯೋಜನೆಯ ಪ್ರಯೋಜನವಾಗಿಲ್ಲ, ಉಡುಪಿ, ಕಾರ್ಕಳ, ಎಣ್ಣೆಹೊಳೆ, ಬೈಂದೂರು ಭಾಗಗಳಲ್ಲಿ ಉತ್ತಮ ನೀರಿನಾಶ್ರಯದ ಹೊಳೆಗಳಿದ್ದರೂ ವಾರಾಹಿ ನೀರನ್ನು ಆ ಭಾಗಗಳಿಗೆ ತೆಗೆದು ಕೊಂಡು ಹೋಗಲು ಪ್ರಯತ್ನಗಳು ನಡೆಯುತ್ತಿವೆ. ಕುಡಿಯಲು ನೀರನ್ನು ತೆಗೆದುಕೊಂಡು ಹೋಗಲು ವಿರೋಧವಿಲ್ಲ, ವಾರಾಹಿ ನೀರಾವರಿ ಯೋಜನೆ ರೈತರ ಕೃಷಿಗೆ ಪೂರಕವಾಗಿರಬೇಕು. ನೀರನ್ನು ಬೇರೆ ಉದ್ಧೇಶಗಳಿಗೆ ಬಳಸಲು ತೆಗೆದು ಕೊಂಡು ಹೋಗುತ್ತಿರುವುದಕ್ಕೆ ಆಕ್ಷೇಪವಿದೆ. ರೈತರ ಕೃಷಿಗೆ ಸಮಪರ್ಕವಾಗಿ ನೀರು ಒದಗಿಸದಿದ್ದಲ್ಲಿ ಉಗ್ರಹ ಹೋರಾಟ ನಡೆಸಲಾಗುವುದು. ಈ ನಿಟ್ಟಿನಲ್ಲಿ ರೈತರ ತಾಳ್ಮೆ ಪರೀಕ್ಷೆ ಬೇಡ ಎಂದರು.
ಡೀಮ್ಡ್ ಫಾರೆಸ್ಟ್ ಬಗ್ಗೆ ದಾಖಲೆ ಕೊಡಿ: 6ಸಾವಿರ ಹೆಕ್ಟೇರ್ ಭೂಮಿಯನ್ನು ಡೀಮ್ಡ್ ಫಾರೆಸ್ಟ್‍ನಿಂದ ತೆಗೆದುಹಾಕಲಾಗಿದ್ದು, ಕೂಡಲೇ ಭೂಮಿಯನ್ನು ರೈತರಿಗೆ ಕೊಡುತ್ತೇವೆ ಎಂದು ರಾಜ್ಯ ಸರಕಾರ ಹೇಳಿಕೊಂಡು ರೈತರಿಗೆ ಹಾಗೂ ಜನರಿಗೆ ದ್ರೋಹ ಮಾಡುತ್ತಿದೆ. ಡೀಮ್ಡ್ ಫಾರೆಸ್ಟ್ ರದ್ದತೆಯ ಬಗ್ಗೆ ಇಲ್ಲಿಯ ತನಕ ಸುಪ್ರೀಂಕೋರ್ಟಿಗೆ ಅರ್ಜಿ ಹಾಕದ ರಾಜ್ಯ ಸರಕಾರ ಹೇಗೆ ಜನರಿಗೆ ಭೂಮಿ ಕೊಡುತ್ತದೆ ಎಂದು ಸ್ವಷ್ಟ ಪಡಿಸಬೇಕು. ಮುಖ್ಯಮಂತ್ರಿ ಅಥವಾ ಸಚಿವರು ಡೀಮ್ಡ್ ಫಾರೆಸ್ಟ್ ರದ್ದತೆಯ ಬಗ್ಗೆ ಸುಪ್ರೀಂಕೋರ್ಟಿಗೆ ಹಾಕಿರುವ ಅಫಿದಾವಿತ್ ಮತ್ತು ದಿನಾಂಕವನ್ನು ರಾಜ್ಯದ ಜನತೆಯ ಮುಂದಿಡಬೇಕು. ನಿಮ್ಮ ರಾಜಕೀಯ ಲಾಭಕ್ಕಾಗಿ ಮುಗ್ಧ ಜನರಿಗೆ ದ್ರೋಹ ಮಾಡಬೇಡಿ. ತಾಕ್ಕತ್ತು ಇದ್ದರೆ ಸುಪ್ರೀಂಕೋರ್ಟಿನ ತೀರ್ಪನ್ನು ರಾಜ್ಯದ ಜನೆಯ ಮುಂದಿಡಿ ಎಂದು ಸವಾಲು ಹಾಕಿದರು.
ಕುಮ್ಕಿ ಹಕ್ಕಿನ ಬಗ್ಗೆ ಸ್ವಷ್ಟತೆ ಇಲ್ಲದ ಸರಕಾರ ಕುಮ್ಕಿ ಹಕ್ಕಿನ ಬಗ್ಗೆಯೂ ಮಾತನಾಡುತ್ತಿದೆ. 2012ರಲ್ಲಿ ಮುಖ್ಯಮಂತ್ರಿಯಾಗಿದ ಸದಾನಂದ ಗೌಡ ಅವರು ಮಹಾಬಲೇಶ್ವರ ಭಟ್ ಮೂಲಕ ಸುಪ್ರೀಂಕೋರ್ಟಿಗೆ ಕುಮ್ಕಿ ಹಕ್ಕಿನ ಬಗ್ಗೆ ಅರ್ಜಿ ಹಾಕುತ್ತಾರೆ. ಅಂದು ಸರಕಾರ ರೈತರಿಗೆ ಕುಮ್ಕಿ ಹಕ್ಕು ಕೊಡುತ್ತೇನೆ ಎಂದು ಹೇಳುತ್ತದೆ. ಮತ್ತೊಂದು ಕಡೆ ಕುಮ್ಕಿ ಭೂಮಿ ಅರಣ್ಯಇಲಾಖೆಗೆ ಸಂಬಂದಪಟ್ಟದು ಎಂದು ಹೇಳುತ್ತದೆ. ಬ್ರಿಟಿಷ್ ಸರಕಾರದ ಕಾಲದಿಂದ ರೈತರಿಗೆ ಬಂದ ಕುಮ್ಕಿ ಹಕ್ಕನ್ನು ಸರಕಾರ ಹಸಿದುಕೊಂಡು ರಾಜ್ಯದ ಜನತೆಯ ಜೀವನದ ಜತೆ ಆಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರಿ ಶಾಲೆ ಮುಚ್ಚುವ ಹುನ್ನಾರ : ರಾಜ್ಯ ಸರಕಾರದ ನಿಲುವು ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯ ತನದಿಂದ ಸರಕಾರಿ ಶಾಲೆಗಳು ಮುಚ್ಚುತ್ತಿವೆ. ಶಿಕ್ಷಣ ಕೊಡಬೇಕಾದದ್ದು ಸರಕಾರದ ಹೊಣೆಯಾಗಿದೆ. ಸರಕಾರ ಶಿಕ್ಷಣವನ್ನು ವ್ಯಾಪಾರಿಕರಣದ ರೀತಿಯಲ್ಲಿ ನೋಡುವಂತದಲ್ಲ. ಅನೇಕ ಕಡೆಗಳಲ್ಲಿ ಮಕ್ಕಳಿಲ್ಲದೆ ಶಾಲೆ ಮುಚ್ಚುತ್ತಿಲ್ಲ. ಶಿಕ್ಷಕರು ಇಲ್ಲದೆ ಶಾಲೆಗಳು ಮುಚ್ಚುತ್ತಿವೆ. ಇಂದಿಗೂ ಅನೇಕ ಕಡೆಗಳಲ್ಲಿ ಶಾಲೆಗಳಲ್ಲಿ ಶಿಕ್ಷಕರೆ ಇಲ್ಲ. ಅ„ಕಾರಿಗಳು ಶಿಕ್ಷಕರು ಇಲ್ಲದಿರುವ ಶಾಲೆಗಳ ಬಗ್ಗೆ ಇಲಾಖೆಗೆ ಮಾಹಿತಿ ನೀಡುತ್ತಿಲ್ಲ. ಒಂದು ಶಾಲೆಯಿಂದ ಮತ್ತೊಂದು ಶಾಲೆಗಳಿಗೆ ಶಿಕ್ಷಕರನ್ನು ಡೆಪ್ಪಟೇಶನ್ ಮೂಲಕ ಕಳುಹಿಸುವ ಮೂಲಕ ಶಿಕ್ಷಕರು ಇರುವ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹಾಳು ಮಾಡುತ್ತಿವೆ. ಮೂಲಭೂತ ಸೌಕರ್ಯ ಒದಗಿಸಬೇಕಾದ ಕರ್ತವ್ಯ ಇಲಾಖೆಯದಾಗಿದೆ. ನಕ್ಸಲ್ ಪೀಡಿತ ಪ್ರದೇಶಗಳ ಶಾಲೆಗಳಲ್ಲಿ ಶಿಕ್ಷಕರೆ ಇಲ್ಲ. ಶಿಕ್ಷಣ ಕೊಡಬೇಕಾದ ಪೂರಕ ವ್ಯವಸ್ಥೆ ಮಾಡದ ಸರಕಾರ ನಿಲುವಿನಿಂದಾಗಿ ನಕ್ಸಲ್ ಬರುವಂತಾಗಿದೆ. ಶಿಕ್ಷಕರು ಇಲ್ಲದ ಶಾಲೆಗಳಿಗೆ ಶಿಕ್ಷಕರು ಹಾಕದಿದ್ದಲ್ಲಿ, ಅಧಿಕಾರಿಗಳ ಹಾಗೂ ಇಲಾಖೆಯ ವಿರುದ್ಧ ಉಗ್ರಹ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತ ಮುಖಂಡ ಎಚ್. ಸರ್ವೋತ್ತಮ ಹೆಗ್ಡೆ ಹಾಲಾಡಿ ಮಾತನಾಡಿ, ಸರಕಾರ ಜನಸಾಮಾನ್ಯರ ಜೀವನವನ್ನು ಸಂಪೂರ್ಣ ಹಾಳುಮಾಡಿವೆ. ಸರಕಾರದ ವ್ಯವಸ್ಥೆಯ ಬಗ್ಗೆ ಮಾತನಾಡಲು ಭಯವಾಗುತ್ತದೆ. ಪ್ರತಿಯೊಂದು ಇಲಾಖೆಗಳಲ್ಲಿ ಭ್ರಷ್ಟಚಾರ ತಾಂಡವಾಡುತ್ತಿವೆ. ರಾಜ್ಯ ಸರಕಾರ ರೈತರ ಹಾಗೂ ಜನಸಾಮಾನ್ಯರ ಪರವಾಗಿಲ್ಲ. ಗುತ್ತಿಗೆದಾರರ ಪರವಾಗಿದೆ. ವಾರಾಹಿ ಇಲಾಖೆಯಲ್ಲಿ ಭಾರೀ ಭ್ರಷ್ಟಚಾರ ನಡೆಯುತ್ತಿದೆ. ಮಕ್ಕಳು ಇರುವ ಶಾಲೆಗಳಿಗೆ ಶಿಕ್ಷಕರನ್ನು ಕೊಡದೆ, ಸರಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿವೆ. ಡೀಮ್ಡ್ ಫಾರೆಸ್ಟ್, ಕುಮ್ಕಿ ಹಕ್ಕು ರೈತರಿಗೆ ಕೊಡುವುದಾಗಲಿ ಮತ್ತು ಸರಕಾರಿ ಶಾಲೆ ಉಳಿಸುವ ಬಗ್ಗೆಯಾಗಲಿ ಸರಕಾರಕ್ಕೆ ಕಷ್ಟದ ಕೆಲಸ ಆಲ್ಲ ಎಂದು ಹೇಳಿದರು.
ವಾರಾಹಿ ನೀರಾವರಿ ಯೋಜನೆಯ ಭೂಸ್ವಾದೀನ ಮತ್ತು ಪರಿಹಾರ, ವಾರಾಹಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಮಾರಕವಾದ ಜಲ ಜೀವನ್ ಮಿಶನ್ ಯೋಜನೆ, ಡೀಮ್ಡ್ ಪಾರೇಸ್ಟ್ ಸಂಬಂಧಿತ ಗೊಂದಲಗಳು, ಗ್ರಾಮೀಣ ಪ್ರದೇಶದಲ್ಲಿರುವ ಸರಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ, ರೈತರ ಕುಮ್ಕಿ ಹಕ್ಕಿನ ಅನಿಶ್ಚಿತತೆ ಸೇರಿದಂತೆ ಮುಂತಾದ ವಿಷಯಗಳ ಚರ್ಚೆಯಲ್ಲಿ ಜಯಪ್ರಕಾಶ ಹೆಗ್ಡೆ ಬಿಲ್ಲಾಡಿ, ವಾಸು ಪೂಜಾರಿ ಬೆಳ್ವೆ, ಕೃಷ್ಣ ಪೂಜಾರಿ ಅಮಾಸೆಬೈಲು, ವಸುಂಧರ ಹೆಗ್ಡೆ ತೊಂಭತ್ತು, ನವೀನ್ ಅಂಡ್ಯಾತ್ತಯ ಹೆಬ್ರಿ, ಸುರೇಶ ಶೆಟ್ಟಿ ಬೆಳ್ವೆ, ಸತೀಶ್ ಪೂಜಾರಿ ನಡಂಬೂರು, ತಿಮ್ಮಪ್ಪ ಪೂಜಾರಿ ಅಮಾಸೆಬೈಲು. ಸುಧಾಕರ ಶೆಟ್ಟಿ ಬಜೆ ಅವರು ಸಮಸ್ಯೆಗಳ ಕುರಿತು ಸಭೆಯಲ್ಲಿ ಗಮನ ಸೆಳೆದರು.
ಬೆಳ್ವೆ ಗ್ರಾ.ಪಂ. ಅಧ್ಯಕ್ಷ ಎಸ್. ಚಂದ್ರಶೇಖರ್ ಶೆಟ್ಟಿ ಸೂರ್ಗೋಳಿ, ರೈತ ಮುಖಂಡರಾದ ಸದಾನಂದ ಶೆಟ್ಟಿ ಕೆದೂರು, ಮಲ್ಯಾಡಿ ಶಿವರಾಮ ಶೆಟ್ಟಿ, ವಿಕಾಸ ಹೆಗ್ಡೆ ಬಸ್ರೂರು, ಕೃಷ್ಣದೇವ ಕಾರಂತ, ದಿನೇಶ ಹೆಗ್ಡೆ ಮೊಳಹಳ್ಳಿ, ಎಸ್. ಜಯರಾಮ ಶೆಟ್ಟಿ ಸೂರ್ಗೋಳಿ, ಉದಯಕುಮಾರ್ ಶೆಟ್ಟಿ ವಂಡ್ಸೆ, ಶರತ್‍ಕುಮಾರ್ ಶೆಟ್ಟಿ ತ್ರಾಸಿ, ಎಚ್. ಸರ್ವೋತ್ತಮ ಹೆಗ್ಡೆ, ಎಸ್. ಸಚ್ಚಿದಾನಂದ ವೈದ್ಯ ಶಂಕರನಾರಾಯಣ, ಶರತ್ ಹೆಗ್ಡೆ ಕೆದೂರು, ನವೀನ್ ಅಂಡ್ಯಾತ್ತಯ ಹೆಬ್ರಿ, ಮೊಳಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಾದಿರಾಜ ಶೆಟ್ಟಿ ಹೆಬ್ರಿ, ಕಿರಣ್ ತೋಳಾರ್ ಕುಚ್ಚೂರು, ಎಚ್. ತಾರಾನಾಥ ಶೆಟ್ಟಿ ಹಿಲಿಯಾಣ, ಉದಯ ಪೂಜಾರಿ ಬೆಳ್ವೆ, ಚಂದ್ರಶೇಖರ್ ಶೆಟ್ಟಿ ಮರತ್ತೂರು, ಕಿರಣ್ ಹೆಗ್ಡೆ ಅಂಪಾರು, ಎಸ್.ಕೆ. ವಾಸುದೇವ ಪೈ ಸಿದ್ದಾಪುರ, ರಾಜೀವ ಶೆಟ್ಟಿ ಶಾಡಿಗುಂಡಿ, ಕೃಷ್ಣ ಪೂಜಾರಿ ಅಮಾಸೆಬೈಲು, ಅಶೋಕಕುಮಾರ್ ಶೆಟ್ಟಿ ಚೋರಾಡಿ, ಬಿ.ಕೆ. ಹರಿಪ್ರಸಾದ ಶೆಟ್ಟಿ, ಸನ್ಮತ್ ಹೆಗ್ಡೆ, ಇಚ್ಚಿತಾರ್ಥ ಶೆಟ್ಟಿ, ರೋಹಿತ್‍ಕುಮಾರ್ ಶೆಟ್ಟಿ ತೊಂಭತ್ತು ಹಾಗೂ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಸತೀಶ್ ಕಿಣಿ ಬೆಳ್ವೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಸಂತೋಷಕುಮಾರ ಶೆಟ್ಟಿ ಬಲಾಡಿ ಕಾರ್ಯಕ್ರಮ ನಿರೂಪಿಸಿದರು.











