ಕುಂದಾಪುರ ಮಿರರ್ ಸುದ್ದಿ…
ಕೋಟ: ಪಾಂಡೇಶ್ವರ ಗ್ರಾಮಪಂಚಾಯತ್‍ನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ 2022-23 ನೇ ಸಾಲಿನ ಪ್ರಥಮ ಹಂತದ ಹಾಗೂ 15 ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನೆ ಕುರಿತ ವಿಶೇಷ ಗ್ರಾಮಸಭೆಯು ಪಂಚಾಯತಿ ಸಭಾಂಗಣದಲ್ಲಿ ಇತ್ತೀಚಿಗೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಹಾಯಕ ಕೃಷಿ ಅಧಿಕಾರಿ ಸುರೇಶ್ ಬಂಗೇರ ಸಮುದಾಯದ ಭಾಗವಹಿಸುವಿಕೆ ,ಉತ್ತರದಾಯಿತ್ವ,ಪಾರದರ್ಶಕತೆಯ ಧೇಯೋದ್ದೇಶಗಳ ಆಶಯಗಳನ್ನು ಹೊಂದಿರುವ ಈ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಎಲ್ಲರ ಸಹಭಾಗಿತ್ವ ಅತ್ಯಗತ್ಯವೆಂದು ಹೇಳಿದರು.
ಯೋಜನೆಯ ಉದ್ದೇಶ ಬಗ್ಗೆ ತಾಲೂಕು ಸಂಯೋಜಕ ಹುಸೇನ್ ಸಾಬ್ .ಡಿ. ಕರಣಾಚಿ ತಮ್ಮ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ಪ್ರತಾಪ್ ಶೆಟ್ಟಿ ಹಾಗೂ ವೈ.ಬಿ.ರಾಘವೇಂದ್ರ ಯೋಜನೆಯ ಉದ್ದೇಶ ಪರಿಪೂರ್ಣವಾಗಬೇಕಾದರೆ ಫಲಾನುಭವಿಗೆ ಕಾಲಕಾಲಕ್ಕೆ ಸರಿಯಾಗಿ ಸಾಮಾಗ್ರಿ ಮೊತ್ತದ ತೀರಾ ವಿಳಂಬನೀತಿ ಸಲ್ಲದು. ಕೂಡಲೇ ಬಾಕಿ ಇರುವ ಸಮಾಗ್ರಿ ಮೊತ್ತವನ್ನು ಫಲಾನುಭವಿ ಖಾತೆಗೆ ಜಮೆಗೊಳಿಸುವಂತೆ ಆಗ್ರಹಿಸಿದರು.
ಸಭೆಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಕಲ್ಪನಾ ದಿನಕರ್ ಪೂಜಾರಿ,ಉಪಾಧ್ಯಕ್ಷ ಸಿಲ್ವೆಸ್ಟರ್ ಡಿಸೋಜ ಸೇರಿದಂತೆ ಸದಸ್ಯರು ,ಗ್ರಾಮ ಸಂಪನ್ಮೂಲ ವ್ಯಕ್ತಿಗಳು,ನರೇಗಾ ಫಲಾನುಭವಿಗಳು ,ಪಂಚಾಯತ್ ಸಿಬ್ಬಂದಿಯವರು ಹಾಜರಿದ್ದರು. ಕಾರ್ಯದರ್ಶಿ ವಿಜಯ ಭಂಡಾರಿ ಸ್ವಾಗತಿಸಿ ವಂದಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ವಡ್ಡರ್ಸೆ ನಿರೂಪಿಸಿದರು.











