ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಪೌರ ಕಾರ್ಮಿಕ ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಆರೋಗ್ಯ ಸಮಸ್ಯೆಗಳು ಬಂದಾಗ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ತಮ್ಮ ಸಮಸ್ಯೆಗಳನ್ನು ಪುರಸಭೆಯ ಗಮನಕ್ಕೆ ತನ್ನಿ, ಆಡಳಿತ ಸದಾ ನಿಮ್ಮೊಂದಿರುತ್ತದೆ ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಹೇಳಿದರು.
Video:
ಕುಂದಾಪುರ ಪುರಸಭಾ ವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮನೆಮನೆಯಿಂದ ಕಸ ಸಂಗ್ರಹಣೆ, ನಗರ ಸೌಂದರ್ಯ ಪಾಲನೆ ಹೀಗೆ ಬೆಳಿಗ್ಗೆಯಿಂದ ಸಂಜೆಯ ತನಕ ನಿಷ್ಠರಾಗಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರ ಶ್ರಮವನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದು ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಹೇಳಿದರು.
ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ದೇವಾಡಿಗ ಮಾತನಾಡಿ, ಪೌರ ಕಾರ್ಮಿಕರ ಅಹವಾಲುಗಳನ್ನು ಹಂತಹಂತವಾಗಿ ಪರಿಹರಿಸುವ ಕೆಲಸವಾಗುತ್ತಿದೆ. ಪೌರ ಕಾರ್ಮಿಕರನ್ನು ಖಾಯಂಗೊಳಿಸುವ ಬಗ್ಗೆ ಸರ್ಕಾರ ಪ್ರಸ್ತಾಪ ಮಾಡಿದೆ. ಹಾಗೆಯೇ ಪುರಸಭಾ ವ್ಯಾಪ್ತಿಯಲ್ಲಿನ ಕೆಲವು ಪೌರಕಾರ್ಮಿಕರ ಕುಟುಂಬಗಳಿಗೆ ಇನ್ನೂ ಹಕ್ಕುಪತ್ರವಾಗಿಲ್ಲ. ಆ ಬಗ್ಗೆಯೂ ಆ ಕುಟುಂಬಗಳಿಗೆ ಎದುರಾಗಿರುವ ಪರಂಭೂಕು ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿಯೂ ಪ್ರಯತ್ನಿಸಲಾಗುತ್ತಿದೆ ಎಂದರು.
ಪುರಸಭಾ ಉಪಾಧ್ಯಕ್ಷ ಸಂದೀಪ್ ಖಾರ್ವಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ, ಪುರಸಭಾ ಕಾರ್ಮಿಕರ ಆರೋಗ್ಯ, ಅವರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿಯೂ ಆಧ್ಯತೆ ನೀಡಲಾಗಿದೆ. ಪೌರಕಾರ್ಮಿಕರ ಮಕ್ಕಳು ಉನ್ನತ ವ್ಯಾಸಂಗ ಮಾಡಿ, ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಬೇಕು. ಈಗಾಗಲೇ ಕೆಲವು ಪೌರ ಕಾರ್ಮಿಕರ ಮಕ್ಕಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪುರಸಭೆಯಲ್ಲಿ ಸೇವೆ ಸಲ್ಲಿಸಿ ನಿಧನರಾದ ದಿ.ದುರ್ಗ ಅವರ ಪತ್ನಿ ಗೌರಿ, ದಿ.ರಾಮ ಅವರ ಪತ್ನಿ ಶಾಂತಿ, ದಿ.ಅಣ್ಣಪ್ಪ ಅವರ ಪತ್ನಿ ವಸಂತಿ, ದಿ.ಸುರೇಂದ್ರ ಅವರ ಪತ್ನಿ ಪ್ರಮೀಳಾ, ದಿ.ಮಂಜುನಾಥ ಅವರ ಪತ್ನಿ ಗೌರಿ, ದಿ.ಶಂಕರ ಅವರ ಪತ್ನಿ ಸರೋಜ, ದಿ.ಅಣ್ಣು ಅವರ ಪತ್ನಿ ಗುಲಾಬಿ ಅವರನ್ನು ಗೌರವಿಸಲಾಯಿತು.
ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಸತೀಶ, ಬಾಲಕೃಷ್ಣ, ಡೆನ್ನಿಸ್ ಗೋತಾ, ಚಂದ್ರಶೇಖರ ಹಾಗೂ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸೇವೆ ಸಲ್ಲಿಸುತ್ತಿರುವ ದ್ಯಾವಮ್ಮ, ರವಿ, ಸಿದ್ದಾರ್ಥ, ಪ್ರಶಾಂತ, ಗುರುರಾಜ, ಕೃಷ್ಣ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ಪೌರ ಕಾರ್ಮಿಕ ಗಣೇಶ ಉಪಸ್ಥಿತರಿದ್ದರು. ಪುರಸಭಾ ಸದಸ್ಯರಾದ ಚಂದ್ರಶೇಖರ ಖಾರ್ವಿ, ಲಕ್ಷ್ಮೀ ಬಾಯಿ, ಪ್ರಭಾವತಿ ಶೆಟ್ಟಿ, ಮಾಜಿ ಅಧ್ಯಕ್ಷೆ ವಸಂತಿ ಮೋಹನ ಸಾರಂಗ, ಮಾಜಿ ಉಪಾಧ್ಯಕ್ಷ ರಾಜೇಶ ಕಾವೇರಿ ಪೌರ ಕಾರ್ಮಿಕರ ದಿನಾಚರಣೆ ಕುರಿತು ಮಾತನಾಡಿದರು.
ಹಿರಿಯ ಆರೋಗ್ಯ ನಿರೀಕ್ಷಕ ರಾಘವೇಂದ್ರ ಸ್ವಾಗತಿಸಿ, ಪರಿಸರ ಅಭಿಯಂತರ ಗುರುಪ್ರಸಾದ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಗೋಪಾಲಕೃಷ್ಣ ಶೆಟ್ಟಿ ವಂದಿಸಿದರು. ಗಣೇಶ ಜನ್ನಾಡಿ ಕಾರ್ಯಕ್ರಮ ನಿರ್ವಹಿಸಿದರು.











