ಕುಂದಾಪುರ ಮಿರರ್ ಸುದ್ದಿ…
ಕೋಟ: : ಯಕ್ಷಗಾನದ ಹೂವಿನ ಕೋಲು ಎನ್ನುವುದು ಪೌರಾಣಿಕ ಪ್ರಸಂಗಗಳ ಆಖ್ಯಾನವಾಗಿದ್ದು ಇದನ್ನು ಪ್ರಸ್ತುತ ಪಡಿಸುವುದು ಸಣ್ಣ ಸಣ್ಣ ಮಕ್ಕಳು. ಮನೆಯ ಮನಗಳಿಗೆ ಹಿತವಾಗಲೆಂದು, ಒಳಿತಾಗಲೆಂದು ಆಶಿಸುವ ಚೌಪದಿಯಿಂದೊಡಗೂಡಿದ ಕಾರ್ಯಕ್ರಮ ಮನಸ್ಸಿಗೆ ಮುದ ನೀಡುವ ಕಾರ್ಯಕ್ರಮ. ಮಗುವನ್ನು ತೊಟ್ಟಿಲಿಗೆ ಹಾಕುವ ಶಾಸ್ತ್ರವನ್ನು ಕಲೆಯಲ್ಲಿ ಬೆಳಗಿಸಬೇಕಾದದ್ದು ಕಲಾವಿದ ಕುಟುಂಬದವರಾದ ನಮ್ಮ ಕರ್ತವ್ಯ ಎಂದು ಡಾ. ಕೀರ್ತಿರಾಜ್ ಅಭಿಪ್ರಾಯ ಪಟ್ಟರು.
ತೆಕ್ಕಟ್ಟೆ ಕೊಮೆಯ ಯಶಸ್ವಿ ಕಲಾವೃಂದ ಕೊಮೆ, ತೆಕ್ಕಟ್ಟೆ ಸಂಸ್ಥೆಯ ಚಿಣ್ಣರ ತಂಡ ಸಾಲಿಗ್ರಾಮ ಕಾರ್ಕಡದ ರಾಷ್ಟ್ರೀಯ ರಂಗ ನಿರ್ದೇಶಕ ಗೋಪಾಲ ಕೃಷ್ಣ ನಾಯರಿ ಮನೆಯ ಕಾರ್ಯಕ್ರಮದಲ್ಲಿ ಡಾ. ಕೀರ್ತಿರಾಜ್ ಹೂವಿನಕೋಲು ಹಸ್ತಾಂತರಿಸಿ ಉದ್ಘಾಟಿಸಿ ಅಕ್ಟೋಬರ್ 17ರಂದು ಮಾತನ್ನಾಡಿದರು.
ತಂಡದ ಪ್ರಾಚಾರ್ಯ ಕೆ.ಪಿ. ಹೆಗಡೆಯವರು ಮಾತನ್ನಾಡಿ, ರಾಷ್ಟ್ರೀಯ ರಂಗ ನಿರ್ದೇಶಕರ ಮನೆಯಲ್ಲಿ ತೊಟ್ಟಿಲ ಶಾಸ್ತ್ರದಲ್ಲಿ ‘ಹೂವಿನಕೋಲು’ ಕಾರ್ಯಕ್ರಮ ಹಚ್ಚು ಪ್ರಸ್ತುತ. ಮಗುವಿಗೆ ಮಕ್ಕಳ ಕಾರ್ಯಕ್ರಮದಿಂದ ಕಲೆಯ ಪ್ರಜ್ಞೆ ಜಾಗೃತವಾಗಿ ಶ್ರೇಷ್ಠ ಕಲಾವಿದನಾಗಿ ಪ್ರಪಂಚವನ್ನು ಬೆಳಗುವಂತಾಗಲಿ ಎಂದು ಹಾರೈಸಿದರು. ಡಾ. ಉದಾತ್ತ, ಸುಲೋಚನ, ಮದ್ದಳೆವಾದಕರಾದ ಸುಹಾಸ ಕರಬ, ಕು| ಹರ್ಷಿತ, ಮಾ| ಪವನ್ ಆಚಾರ್, ಕಾರ್ಯದರ್ಶಿ ವೆಂಕಟೇಶ ವೈದ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮಕ್ಕಳ ತಂಡದಿಂದ ಪೌರಾಣಿಕ ಆಖ್ಯಾನ ಭಾಗವಾದ ‘ದ್ರೌಪದಿ-ಅರ್ಜುನ’ ರ ಸನ್ನಿವೇಶವನ್ನು ಅತ್ಯದ್ಭುತವಾಗಿ ಕಟ್ಟಿಕೊಟ್ಟು ಕೋಲಾಟದೊಂದಿಗೆ ಮಂಗಳ ಹಾಡಿದರು.











