ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕೇಂದ್ರ ಚುನಾವಣಾ ಆಯೋಗದ ಎಸ್.ಎಸ್.ಆರ್. ಸ್ಪೆಷಲ್ ಸಮ್ಮರಿ ರಿವಿಜನ್‌ಗೆ ಬುಧವಾರದಿಂದ ಚಾಲನೆ ನೀಡಲಾಗಿದ್ದು ಮುಂದಿನ ಎರಡು ತಿಂಗಳ ವರೆಗೆ ನಡೆಯಲಿದೆ ಎಂದು ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ ಹೇಳಿದರು. ಅವರು ಭಾರತ ಚುನಾವಣಾ ಆಯೋಗ, ಉಡುಪಿ ಜಿಲ್ಲಾಡಳಿತ ಹಾಗೂ ತಹಸೀಲ್ದಾರರ ಕಚೇರಿ ಸಹಯೋಗದಲ್ಲಿ ಕುಂದಾಪುರದ ಸರ್ಕಾರೀ ಪದವಿ ಪೂರ್ವ ಕಾಲೇಜು, ಬೋರ್ಡ್ ಹೈಸ್ಕೂಲಿನಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಮತದಾರರ ಪಟ್ಟಿ ಅಭಿಯಾನವನ್ನು ಚಾಲನೆಗೊಳಿಸಿ ಮಾಧ್ಯಮದ ಜೊತೆಗೆ ಮಾತನಾಡಿದರು.
ಮತದಾನಕ್ಕೆ ಅರ್ಹತೆಯಿರುವ ಎಲ್ಲಾ ಯುವ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿವುದು ಮತ್ತು ಅನರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡುವುದು ಈ ಅಭಿಯಾನದ ಉದ್ಧೇಶವಾಗಿದೆ ಎಂದ ಅವರು, ಮತದಾರರ ಪಟ್ಟಿಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಚುನಾವಣಾ ಆಯೋಗ ಈ ಅಭಿಯಾನಕ್ಕೆ ಆದೇಶ ನೀಡಿದೆ ಎಂದರು.
ಈ ಅಭಿಯಾನದಡಿಯಲ್ಲಿ ಬಿ.ಎಲ್.ಒಗಳು ಮನೆ ಮನೆ ಭೇಟಿ ನೀಡಿ ಪರಿಶೀಲನೆ ನಡೆಸುವಾಗ ಪ್ರತಿಯೊಬ್ಬರೂ ಸಹಕರಿಸಿದಾಗ ಅಭಿಯಾನ ಯಶಸ್ಸು ಕಾಣಲು ಸಾಧ್ಯ. ಸರಿಯಾದ ಮತದಾರರ ಪಟ್ಟಿಯಿಂದಷ್ಟೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ನಡೆಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಬೋರ್ಡ್ ಹೈಸ್ಕೂಲಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅಭಿಯಾನದಲ್ಲಿ ಪಾಲ್ಗೊಂಡರು. ಕುಂದಾಪುರದ ಮುಖ್ಯ ಪೇಟೆಯಲ್ಲಿ ಮತದಾರರ ಪಟ್ಟಿಯ ಪರಿಶೀಲನೆ ಉದ್ಧೇಶಗಳ ಬಗ್ಗೆ ಜಾಗೃತಿ ಮೂಡಿಸಲು ಮೆರವಣಿಗೆಯಲ್ಲಿ ಸಾಗಿದರು. ಈ ಸಂದರ್ಭ ಡಿವೈಎಸ್ಪಿ ಶ್ರೀಕಾಂತ್, ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಜಿ., ಉಪಪ್ರಾಂಶುಪಾಲ ಕಿರಣ್ ಹೆಗ್ಡೆ, ತಹಸೀಲ್ದಾರ್ ಕಿರಣ್ ಜಿ ಗೌರಯ್ಯ, ಶಿಕ್ಷಕ ಪ್ರಕಾಶ್ ಚಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.











