ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಪರೀಕ್ಷೆ ಎಂಬುದು ಭಯವಲ್ಲ. ಪೂರ್ವ ಸಿದ್ಧತೆ ಮತ್ತು ವಿದ್ಯಾರ್ಥಿಗಳಲ್ಲಿ ದೃಢತೆ ಇದ್ದರೆ ಪರೀಕ್ಷೆಯನ್ನೂ ಆಟದಂತೆ ಸ್ವೀಕರಿಸಬಹುದು ಎಂದು ಉಡುಪಿಯ ಡಾ. ಎ ವಿ ಬಾಳಿಗಾ ಸ್ಮಾರಕ ಆಸ್ಪತ್ರೆ ಮನೋವೈದ್ಯ ಹಾಗೂ ಲೇಖಕ ಶ್ರೀ ವಿರೂಪಾಕ್ಷ ದೇವರಮನೆ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.

ಅವರು ಕುಂದಾಪುರ ತಾಲೂಕಿನ ಕಾಳಾವರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಮತ್ತು ಎಸ್ ಡಿ ಎಂ ಸಿ ವತಿಯಿಂದ ಹಮ್ಮಿಕೊಳ್ಳಲಾದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರ ಸಭೆಯಲ್ಲಿ ಹದಿಹರೆಯದ ಸಮಸ್ಯೆ, ಪರೀಕ್ಷಾ ಭಯ, ಹಾಗೂ ಒತ್ತಡ ನಿರ್ವಹಣೆ ಕುರಿತ ಕಾರ್ಯಾಗಾರದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಕಂಡು ಬರುವ ಮೊಬೈಲ್ ಫೋನ್ ಬಳಕೆ, ಪರೀಕ್ಷಾ ಭಯ, ಕೀಳರಿಮೆಗಳಿಗೆ ಪರಿಹಾರದ ಕುರಿತು ಚಿಕ್ಕ ಕಥೆಗಳ ಮೂಲಕ ತಿಳಿಸಿಕೊಟ್ಟರು. ಶಿಕ್ಷಕರಿಗೆ ಮಕ್ಕಳೊಂದಿಗೆ ಹಾಗೂ ಪೋಷಕರೊಂದಿಗೆ ಉತ್ತಮ ಸಂವಹನದ ಮೂಲಕ ಬಾಂಧವ್ಯ ಬೆಸೆಯುವ ತಂತ್ರಗಳನ್ನು ತಿಳಿಸಿದರು. ಪೋಷಕರು ಮಕ್ಕಳೊಂದಿಗೆ ಇರಬೇಕಾದ ಸಮಯ ಬದ್ಧತೆಗಳ ಬಗ್ಗೆ ಪ್ರಾತ್ಯಕ್ಷಿಕೆ ಮಾಡಿದರು. ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ನಿತ್ಯಾನಂದ ದೇವಾಡಿಗ ವಹಿಸಿದ್ದರು. ಮುಖ್ಯೋಪಾಧ್ಯಾಯಿನಿ ಗಾಯತ್ರಿ ಅಡಿಗ ಪ್ರಸ್ತಾವಿಸಿ ಸ್ವಾಗತಿಸಿದರು. ಶಿಕ್ಷಕ ದಿನೇಶ್ ಪ್ರಭು ಪರಿಚಯಿಸಿದರು. ಗಣೇಶ ಶೆಟ್ಟಿಗಾರ್ ವಂದಿಸಿ, ಶಿಕ್ಷಕ ರವಿರಾಜ ಶೆಟ್ಟಿ ನಿರೂಪಿಸಿದರು.











