ಕುಂದಾಪುರ ಮಿರರ್ ಸುದ್ದಿ…
ಬೈಂದೂರು :ಬಿಜೆಪಿ ಅಭಿವೃದ್ದಿ ವಿಷಯದ ಬಗ್ಗೆ ಮಾತನಾಡುತ್ತಿಲ್ಲ. ಧರ್ಮ, ಜಾತಿಯ ವಿಷಯವೇ ಪ್ರಮುಖ ಅಜೆಂಡಾವನ್ನಾಗಿಸಿಕೊಂಡಿದೆ. ಸುಳ್ಳೇ ಬಿಜೆಪಿ ಬಂಡವಾಳವನ್ನಾಗಿ ಮಾಡಿಕೊಂಡಿದೆ. ಸರ್ಕಾರ ಸಂಪೂರ್ಣ ಭೃಷ್ಟಾಚಾರದಲ್ಲಿ ಮುಳುಗಿದ್ದು ಭೃಷ್ಟಾಚಾರವನ್ನು ವೈಭವೀಕರಣ ಮಾಡಿಕೊಳ್ಳುತ್ತಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದರು.

ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಾಂಗ್ರೆಸ್ ಕರಾವಳಿ ಪ್ರಜಾ ಧ್ವನಿ ಯಾತ್ರೆ ಬೃಹತ್ ಸಮಾವೇಶ ಫೆ.19 ವಂಡ್ಸೆಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಬಿಜೆಪಿಗರು ಭೃಷ್ಟಾಚಾರದಲ್ಲಿ ಜೈಲಿಗೆ ಹೋಗಿ ಬರುವಾಗ ವಿಜಯೋತ್ಸವ ಆಚರಿಸುವ ಮಟ್ಟಿಗೆ ಭೃಷ್ಟಾಚಾರವನ್ನು ವೈಭವೀಕರಣ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಎಲ್ಲರನ್ನು ಸಮಾನವಾಗಿ ನೋಡುವುದನ್ನು ಬಿಟ್ಟು ಸಂವಿಧಾನದ ವಿರುದ್ಧ ಹೋಗುತ್ತಿದೆ. ಇಂದು ಬಿಜೆಪಿಯಲ್ಲಿ ಇರುವುದು ದೇಶಭಕ್ತಿಯಲ್ಲ, ದ್ವೇಷಭಕ್ತಿ ಎಂದು ಗುಡುಗಿದರು.
ಚುನಾವಣೆ ಸಮೀಸುತ್ತಿರುವಾಗ ಪ್ರಧಾನಿ ಮೋದಿ, ಅಮಿತ್ ಷಾ, ನಡ್ಡಾ ಎಲ್ಲರೂ ಕರಾವಳಿ ಭಾಗಕ್ಕೆ ಬರುತ್ತಾರೆ. ಆದರೆ ಪ್ರವಾಹ, ಸಮುದ್ರ ಕೊರೆತಬಂದಾಗ, ನೆರೆ ಹಾವಳಿ ಸಂಭವಿಸಿ ಜನ ಅತಂತ್ರರಾಗುವ ಸಮಯದಲ್ಲಿ ಯಾವ ನಾಯಕರು ಈ ಕಡೆ ಬರುವುದಿಲ್ಲ. ಇದು ಜನರು ಅರ್ಥ ಮಾಡಿಕೊಳ್ಳಬೇಕು. ರಾಜ್ಯದಲ್ಲಿ 40% ಕಮಿಷನ್ ಆರೋಪ ಇವತ್ತು ವ್ಯಾಪಕವಾಗಿ ಕೇಳಿ ಬರುತ್ತಿದ್ದು ಗುತ್ತಿಗೆದಾರರ ಸಂಘ ಪ್ರಧಾನಿಗಳಿಗೆ ಮನವಿ ಸಲ್ಲಿಸಿ ಒಂದುವರೆ ವರ್ಷವಾದರೂ ಪ್ರಧಾನಿಯಿಂದ ಉತ್ತರವಿಲ್ಲ. ಇದು ಸಂಶಯಕ್ಕೆ ಎಡೆ ಮಾಡಿಕೊಡುತ್ತಿದೆ ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಿದೆ. ಆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಆರೋಗ್ಯ, ಶಿಕ್ಷಣ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಿ ಪ್ರನಾಳಿಕೆ ಬಿಡುಗಡೆ ಮಾಡಿದೆ. ಸ್ವಾತಂತ್ರ್ಯ ಭಾರತದಲ್ಲಿ ಸಂಪತ್ತು ಸಮಾನವಾಗಿ ಹಂಚಿಕೆಯಾಗಬೇಕು. 10 ಜನರಲ್ಲಿಯೇ ಭಾರತದ ಸಂಪತ್ತು ಹಂಚಿಕೆಯಾಗಬಾರದು. ಕಾಂಗ್ರೆಸ್ ಪಕ್ಷ ಜನರ ಬದುಕಿನ ಬಗ್ಗೆ ಮಾತಾಡುತ್ತದೆ ವಿನಃ ಭಾವನೆಗಳ ಬಗ್ಗೆ ಅಲ್ಲ ಎಂದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಪ್ರಜೆಗಳ ಧ್ವನಿಯನ್ನು ಆಲಿಸಿ, ಸಮಸ್ಯೆ ಕ್ರೋಢೀಕರಿಸಿ, ರಾಜ್ಯಮಟ್ಟದಲ್ಲಿ ಪರಿಹಾರ ಕಂಡುಕೊಳ್ಳುವುದು ಪ್ರಜಾಧ್ವನಿ ಯಾತ್ರೆಯ ಉದ್ದೇಶವಾಗಿದೆ. ಕರಾವಳಿ ಭಾಗದಲ್ಲಿ ಐಟಿ ಪಾರ್ಕ್, ಗಾರ್ಮೆಂಟ್ಸ್ ಪಾರ್ಕ್ ಸ್ಥಾಪನೆ, ಮೀನುಗಾರಿಕೆಯಲ್ಲಿ ಆಕಸ್ಮಿಕ ಸಾವನ್ನಪ್ಪಿದರೆ 10 ಲಕ್ಷ ವಿಮೆ, ನಾಡ ದೋಣಿ, ಬೋಟ್‍ಗಳಿಗೆ 25% ಸಹಾಯಧನ, ಸಬ್ಸಿಡಿಯಲ್ಲಿ ಸೀಮೆಎಣ್ಣೆ, ಡಿಸೇಲ್ ವಿತರಣೆ, ಮೀನುಗಾರ ಮಹಿಳೆಯರಿಗೆ 1 ಲಕ್ಷ ರೂ ಬಡ್ಡಿರಹಿತ ಸಾಲ ನೀಡಲು ಕ್ರಮ ತಗೆದುಕೊಳ್ಳಲಾಗುವುದು. ಸೂಕ್ಷ್ಮ ಹಿಂದುಳಿದ ಸಮುದಾಯಗಳನ್ನು ಒಟ್ಟುಗೂಡಿಸಿ ಅಭಿವೃದ್ದಿ ನಿಗಮ ರಚನೆ ಮಾಡಿ 250 ಕೋಟಿ ವಾರ್ಷಿಕ ಮೀಸಲಿಡಲಾಗುವುದು ಎಂದರು.
ಕೆಪಿಸಿಸಿ ಮಾಧ್ಯಮ ವಕ್ತಾರ ಸುಧೀರ್ ಕುಮಾರ್ ಮುರೋಳಿ ಮಾತನಾಡಿ, ಹಿಂದೆ ಕಾಂಗ್ರೆಸ್ ಸರ್ಕಾರ ನೀಡಿದ ದತ್ತಕವಾದ ಅಧಿಕಾರವನ್ನು ಚಲಾಯಿಸುವಲ್ಲಿ ಬೈಂದೂರು ಕ್ಷೇತ್ರದ ಶಾಸಕರು ವಿಫಲರಾಗಿದ್ದಾರೆ. 5 ವರ್ಷದ ಅವಧಿಯಲ್ಲಿ ಅಕ್ರಮ-ಸಕ್ರಮ ಸಭೆಯನ್ನೇ ಮಾಡಿಲ್ಲ. ಇವತತು ಬಿಜೆಪಿ ಹೊಸ ಘೋಷಣೆ ಮಾಡುತ್ತಿದೆ. ಯಾವ ಕಾರಣಕ್ಕಾಗಿ ಇವತ್ತು ಬಿಜೆಪಿ ಭರವಸೆ? ನಾರಾಯಣ ಗುರುಗಳ ವಿಚಾರವನ್ನು ಫಠ್ಯ ಪುಸ್ತಕದಿಂದ ತೆಗೆದಾಗ , ಈ ಭಾಗದಲ್ಲಿ ಹುಟ್ಟಿದ ಬ್ಯಾಂಕ್‍ಗಳ ವಿಲೀನ ವಾದಾಗ ಏಕೆ ಸ್ಥಳೀಯ ಶಾಸಕರು ಮಾತನಾಡಿಲ್ಲ. ಶಾಸಕರ ಕಛೇರಿಯ ಬಣ್ಣ ಬದಲಾಯಿಸಿ, ಜನರನ್ನು ಶಾಸಕರ ಕಚೇರಿಯಿಂದ ದೂರ ಇಟ್ಟಿರುವುದೇ ಇವರ ಸಾಧನೆ ಎಂದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ಪರೇಶ ಮೇಸ್ತ ವಿಷಯವನ್ನು ಇಟ್ಟುಕೊಂಡು ಜನರಿಗೆ ಸುಳ್ಳನ್ನು ನಂಬಿಸಿ ಗೆದ್ದ ಶಾಸಕರು ತಮ್ಮದೇ ಪಕ್ಷದ ಕಾರ್ಯಕರ್ತ ಉದಯ ಗಾಣಿಗರನ್ನು ತಮ್ಮದೇ ಪಕ್ಷದ ಗ್ರಾ.ಪಂ.ಅಧ್ಯಕ್ಷ ಕೊಲೆ ಮಾಡಿದಾಗ ಅದನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಾರೆ. ಬೇರೆ ಬೇರೆ ಕೊಲೆಗಳಲ್ಲಿ ಸಂತೃಪ್ತ ಕುಟುಂಬಕ್ಕೆ 25 ಲಕ್ಷ ಕೊಡುವ ಸರ್ಕಾರ ತಮ್ಮದೇ ಪಕ್ಷದ ಕಾರ್ಯಕರ್ತನ ಸಾವಿಗೆ ಏಕೆ ನ್ಯಾಯ ಒದಗಿಸಿಲ್ಲ? ಚುನಾವಣೆಯ ಸಂದರ್ಭ ಐದು ನದಿಗಳ ಜೋಡಣೆ, ವಿಮಾನ ನಿಲ್ದಾಣ, ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಏನಾಯಿತು? ಬೈಂದೂರು ಸರ್ಕಾರಿ ಆಸ್ಪತ್ರೆಯನ್ನು 100 ಬೆಡ್ ಆಸ್ಪತ್ರೆ ಮಾಡಲಾಗಲಿಲ್ಲ. ಅಕ್ರಮ ಸಕ್ರಮ ನಾಲ್ಕುವರೆ ವರ್ಷಕ್ಕೆ 2 ಸಭೆ ಮಾಡಿದ್ದು ಇವರ ಸಾಧನೆ. ಎಷ್ಟು ಜನರಿಗೆ 94ಚ ಕೊಟ್ಟಿದ್ದಿರಿ? ಯಡ್ತರೆ ಬಳಿ ನೀರಿಲ್ಲ ಕೆರೆಯ ಸ್ಥಳದಲ್ಲಿ ಬೈಂದೂರು ಬಸ್ ನಿಲ್ದಾಣ ಮಾಡಲು ಹೊರಟಾಗ ಬಿಜೆಪಿಗರು ಅದು ಹಕ್ಕಿ ನೀರು ಕುಡಿಯುವ ಕೆರೆ ಎಂದು ಗೊಂದಲ ಸೃಷ್ಟಿ ಮಾಡಿದರು. ಬಳಿಕ ಅವರ ಶಾಸಕರೇ ಅಲ್ಲಿ ಗುದ್ದಲಿ ಪೂಜೆ ಮಾಡುತ್ತಾರೆ. ಹೀಗೆ ಹಲವಾರು ಯೋಜನೆಗಳು ನನ್ನ ಕಾಲದಲ್ಲಿ ಮಂಜೂರಾತಿ ಆಗಿದ್ದು, ಈ ಬಿಜೆಪಿಗರು ಕೆಲಸ ಮಾಡಲು ಇರುವುದಲ್ಲ. ಜನರನ್ನು ದಿಕ್ಕು ತಪ್ಪಿಸುವುದರಲ್ಲಿ ನಿರತರಾಗಿದ್ದಾರೆ. ನಾನು ನಾಲ್ಕು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದೇನೆ. ಈಗ ನನ್ನಲ್ಲಿ ದುಡ್ಡಿಲ್ಲ, ಜನ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನನ್ನಲ್ಲಿ ಹಣ ಇಲ್ಲ ನಿಜ, ದುಡ್ಡಿಲ್ಲದೇ ಈ ಚುನಾವಣೆ ಗೆಲ್ತೇನೆ. ಅಭಿವೃದ್ದಿ ತೂಕ ಮಾಡಿ ಜನ ಮತ ಹಾಕುತ್ತಾರೆ. ಬೈಂದೂರು ಬಿಜೆಪಿಯಲ್ಲಿ ಶಾಸಕ ಸ್ಥಾನಕ್ಕೆ 12ಕ್ಕೂ ಹೆಚ್ಚು ಜನ ಅಕಾಂಕ್ಷಿಗಳಿದ್ದಾರೆ. ಕಾಂಗ್ರೆಸ್‍ನಲ್ಲಿ ಹಾಗಿಲ್ಲ, ಏಕೈಕ ಅಭ್ಯರ್ಥಿ, ಈಗ ಬಿಜೆಪಿಯೇ ಭರವಸೆ ಎಂದು ಘೋಷಣೆ ಆರಂಭಿಸಿದ್ದಾರೆ. ಅದು ಸರಿ, ಅವರು ಭರವಸೆ ಕೊಡುವುದಕ್ಕಾಗಿಯೇ ಇರುವುದು ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಪಕ್ಷದ ಪ್ರಮುಖರಾದ ಎಂ.ಎ ಗಫೂರ್, ರಾಜು ಪೂಜಾರಿ, ರಘುರಾಮ ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ, ಪ್ರಸನ್ನಕುಮಾರ್ ಶೆಟ್ಟಿ, ಸಂಪಿಗೇಡಿ ಸಂಜೀವ ಶೆಟ್ಟಿ, ವಂಡಬಳ್ಳಿ ಜಯರಾಮ ಶೆಟ್ಟಿ, ವಾಸುದೇವ ಯಡಿಯಾಳ, ಮದನ್ ಕುಮಾರ್, ರೋಶನ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ಅನಂತ ಮೊವಾಡಿ, ಉದಯ ಪೂಜಾರಿ, ಸಂತೋಷ್ ಶೆಟ್ಟ ಮೊದಲಾದವರು ಉಪಸ್ತಿತರಿದ್ದರು.
ಈ ಸಂಧರ್ಭದಲ್ಲಿ ಅನೇಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ವಂಡ್ಸೆ ಬ್ಲಾಕ್ ಅಧ್ಯಕ್ಷ ಪ್ರದೀಪ ಕುಮಾರ್ ಶೆಟ್ಟಿ ಸ್ವಾಗತಿಸಿ, ವಂಡ್ಸೆ ಗ್ರಾಮ ಪಂಚಾಯತಿ ಅಧ್ಯಕ್ಷ ಉದಯ ಕುಮಾರ ಶೆಟ್ಟಿ ವಂದಿಸಿದರು. ಸುನೀತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.











