ಕುಂದಾಪುರ ಮಿರರ್ ಸುದ್ದಿ…


ಕುಂದಾಪುರ: ದೇಶ ಸಮೃದ್ಧಿಯಾಗಲಿಕ್ಕೆ, ದೇಶ ಶಕ್ತಿ ಶಾಲಿಯಾಗಲಿಕ್ಕೆ, ದೇಶದ ಜನರು ಸ್ವಾಭಿಮಾನದಿಂದ ಬದುಕಲು ಪ್ರಧಾನಿ ನರೇಂದ್ರ ಮೋದಿ ಅವರು, ಇನ್ನಷ್ಟು ಕಾಲ ಈ ದೇಶದ ಪ್ರಧಾನಮಂತ್ರಿಯಾಗಿ ಮುಂದುವರೆಯಬೇಕಾದ ಅನೀವಾರ್ಯತೆ ಇದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು.
ಇಲ್ಲಿಗೆ ಸಮೀಪದ ಹೆಮ್ಮಾಡಿಯ ಜಯಶ್ರೀ ಸಭಾಂಗಣದಲ್ಲಿ ಭಾನುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರ ಕಾಲದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಚುನಾವಣೆಯ ದಿಕ್ಸೂಚಿಯಾಗಲಿದೆ. ಯಾವುದೇ ಖರ್ಚು ಮಾಡದೆ, ಅರ್ಜಿಯನ್ನೂ ನೀಡದೆ ರೈತರ ಖಾತೆಗೆ ಸರ್ಕಾರದಿಂದ ಹಣ ಬರುವ ಕಿಸಾನ್ ಸಮ್ಮಾನ್ ಯೋಜನೆಯನ್ನು ಜಾರಿಗೆ ತಂದಿರುವ ಶ್ರೇಯಸ್ಸು ಹಾಗೂ ಜನ ಸಾಮಾನ್ಯರಿಗೂ ಪಿಂಚಣೆ ಯೋಜನೆ ತಂದಿರುವುದು ನಮ್ಮ ಸರ್ಕಾರದ ಸಾಧನೆಯಾಗಿದೆ. ಜನಸಾಮಾನ್ಯರ ಬದುಕನ್ನು ಬದಲಾಯಿಸಲು ಬಿಜೆಪಿ ಕಟಿಬದ್ಧವಾಗಿರುವ ಬಿಜೆಪಿ ಸರ್ಕಾರಗಳು ಜನಪರ ಯೋಜನೆಗಳನ್ನು ಜಾರಿಗೊಳಿಸುವಾಗ ಯಾವುದೇ ಗ್ಯಾರಂಜಿ ಕಾರ್ಡ್ನ್ನೂ ನೀಡಿರಲಿಲ್ಲ. ಈ ಬಾರಿಯ ಚುನಾವಣೆ ಜಾತಿ-ವರ್ಗದ ಚುನಾವಣೆಯಲ್ಲ, ರಾಷ್ಟ್ರಕ್ಕಾಗಿ ನಡೆಯುವ ಚುನಾವಣೆ ಎಂದ ಅವರು, ಜಿಲ್ಲೆಯ ಐದು ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಜಯಗಳಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಮಾತನಾಡಿ, ಈ ಚುನಾವಣೆ ಹಣವಂತರದ್ದೋ, ಜಾತಿವಂತರದ್ದೋ ಚುನಾವಣೆಯಲ್ಲ, ಇದು ಕಾರ್ಯಕರ್ತರ ಚುನಾವಣೆ. ಯಾವುದೇ ಕಾರಣದಿಂದಲೂ ಕಾರ್ಯಕರ್ತರೂ ವಿಶ್ವಾಸ ಕಳೆದುಕೊಳ್ಳಬಾರದು. ಮುಂದಿನ ಚುನಾವಣೆಗಳಲ್ಲಿಇನ್ನೊಬ್ಬ ಕಾರ್ಯಕರ್ತನಿಗೆ ಪಕ್ಷ ಅವಕಾಶ ನೀಡಿದರೂ ನಾನು ಅದನ್ನು ಮನ:ಪೂರ್ವಕವಾಗಿ ಸ್ವೀಕರಿಸುತ್ತೇನೆ. ಈ ರೀತಿಯ ವ್ಯವಸ್ಥೆ ಕೇವಲ ಬಿಜೆಪಿ ಮಾತ್ರ ಸಾಧ್ಯ. ನಾನು ಇನ್ನೂ ಬರೆಗಾಲಿನಲ್ಲಿಯೇ ತಿರುಗುತ್ತೇನೆ. ನೆಲದಲ್ಲಿಯೇ ಮಲಗುತ್ತೇನೆ ಇದು ನನ್ನ ಬದ್ಧತೆಯೂ ಕೂಡ. ಸಮುಷ್ಠಿ ಅಭಿಪ್ರಾಯಕ್ಕೆ ಗೌರವ ಕೊಡುವ ನನಗೆ, ವೇದಿಕೆಯ ಭಾಷಣಕ್ಕಿಂತ ಒಟ್ಟಾಗಿ ಕೂತು ಮಾತಾಡುವ ಬೈಠಕ್ನಲ್ಲಿ ವಿಶ್ವಾಸ ಇದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳದೆ ಇದ್ದಾಗ ಪ್ರಶ್ನಿಸುವ ಮನೋಭಾವವನ್ನು ರೂಢಿಸಿಕೊಳ್ಳಬೇಕು. ಕಾರ್ಯಕರ್ತರು ತೋರಿಸುತ್ತಿರುವ ಪ್ರೀತಿ-ವಿಶ್ವಾಸಗಳು ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ ಎಂದರು.
ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷರಾದ ದೀಪಕ್ಕುಮಾರ ಶೆಟ್ಟಿ, ಪ್ರಧಾನ ಕಾರ್ಯದರ್ಶಿನಿ ಪ್ರಿಯದರ್ಶಿನಿ ದೇವಾಡಿಗ, ಪಕ್ಷದ ಪ್ರಮುಖರಾದ ಮಾಲತಿ ನಾಯ್ಕ್ ಇದ್ದರು.











