ಕುಂದಾಪುರ ಮಿರರ್ ಸುದ್ದಿ….

ಬೈಂದೂರು: ಕೇಂದ್ರ ಸರ್ಕಾರದ 100 ಕೋಟಿ ಬಹುಮಾನದ ಆಸೆಗೆ ಮೀನುಗಾರರಿಗೆ ಸಿಗುತ್ತಿದ್ದ ಸೀಮೆಎಣ್ಣೆಯನ್ನು ರದ್ಧುಗೊಳಿಸಿದ್ದು ರಾಜ್ಯದಲ್ಲಿ ಹಿಂದೆ ಸರ್ಕಾರ ನಡೆಸಿದ ಕಾಂಗ್ರೆಸ್ ಎಂದು ಮಾಜೀ ಸಚಿವ ಪ್ರಮೋದ್ ಮಧ್ವರಾಜ್ ಆರೋಪಿಸಿದ್ದಾರೆ. ಅವರು ಬೈಂದೂರಿನ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಅಂದಿನ ಕೇಂದ್ರ ಸರ್ಕಾರ ಪಿಡಿಎಸ್ ಸೀಮೆ ಎಣ್ಣೆಯಿಂದ ಆರೋಗ್ಯದ ಸಮಸ್ಯೆ ಬರುತ್ತದೆ ಎನ್ನುವ ಧೋರಣೆಯಿಂದ ಪಿಡಿಎಸ್ ಸೀಮೆಎಣ್ಣೆ ಬಳಕೆ ನಿಲ್ಲಿಸಿದರೆ 100 ಕೋಟಿ ಬಹುಮಾನ ನೀಡುವುದಾಗಿ ಹೇಳಿದ್ದರಿಂದ ರಾಜ್ಯ ಸರ್ಕಾರ 100 ಕೋಟಿ ದುರಾಶೆಗೆ ಯುಟಿ ಖಾದರ್ ಈ ಕ್ರಮ ಕೈಗೊಂಡಿದ್ದರು. ಈಗ ಅದೇ ಕಾಂಗ್ರೆಸ್ ಪಕ್ಷ ಮೀನುಗಾರರಿಗೆ ಸೀಮೆ ಎಣ್ಣೆ ಕೊಡುತ್ತಿಲ್ಲ ಎಂದು ಆರೋಪಿಸುತ್ತಿದೆ. ಆದರೆ ನರೇಂದ್ರ ಮೋದಿ ಸರ್ಕಾರ ನೇರವಾಗಿ ಮೀನುಗಾರರಿಗೆ ಸೀಮೆ ಎಣ್ಣೆ ನೀಡುವ ಕ್ರಮ ಕೈಗೊಂಡಿದೆ. ಈಗಾಗಲೇ 1488 ಕೆಎಲ್ ಸೀಮೆಣ್ಣೆಯನ್ನು ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮೀನುಗಾರರಿಗೆ ಬಿಡುಗಡೆ ಮಾಡಿದೆ ಎಂದರು.
ಪ್ರತಿಯೊಂದು ರಾಜಕೀಯ ಪಕ್ಷಗಳೂ ಆರ್ಥಿಕವಾಗಿ ಸದೃಢರಾದವರನ್ನೇ ಚುನಾವಣೆಗೆ ನಿಲ್ಲಿಸಿ, ಅವರ ಹಣದಿಂದಲೇ ಚುನಾವಣೆ ಎದುರಿಸುತ್ತಿದ್ದರೆ, ಸಾಮಾನ್ಯರಲ್ಲಿ ಸಾಮಾನ್ಯರನ್ನು ಚುನಾವಣೆಗೆ ನಿಲ್ಲಿಸ ಶಾಸಕರನ್ನಾಗಿ ಮಾಡುವ ಪಕ್ಷ ಬಿಜೆಪಿ ಮಾತ್ರ ಎಂದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗವಾದ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿರುವ ಗುರುರಾಜ ಗಂಟಿಹೊಳೆಯವರಿಗೆ ಬಿಜೆಪಿ ಟಿಕೆಟ್ ನೀಡಿದರೆ ಇನ್ನೊಂದು ತುದಿಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಕೂಲಿ ಕಾರ್ಮಿಕೆಯಾಗಿರುವ ಭಾಗಿರಥಿಯವರಿಗೆ ಟಿಕೆಟ್ ಕೊಡುವ ಮೂಲಕ ಬಿಜೆಪಿ ಜನಸಾಮಾನ್ಯನ ಪಕ್ಷ ಎನ್ನುವುದನ್ನು ಸಾಬೀತು ಮಾಡಿದೆ ಎಂದರು.
ಇಡೀ ದೇಶ ಹಿಂದೂ ಬಹುಸಂಖ್ಯಾತರನ್ನು ಹೊಂದಿರುವ ದೇಶ. ಹಿಂದುತ್ವದ ಪರವಾಗಿರುವ ಬಿಜೆಪಿಯ ವಿರುದ್ಧ ಕಾಂಗ್ರೆಸ್ ಹರಿಹಾಯುತ್ತಿದೆ ಮಾತ್ರವಲ್ಲ ಕಾಂಗ್ರೆಸ್ ಮುಖಂಡರು ಬಹಿರಂಗವಾಗಿ ನಾವು ಹಿಂದುತ್ವವನ್ನು ವಿರೋಧಿಸುತ್ತೇವೆ ಎನ್ನುವ ಹೇಳಿಕೆ ನೀಡುತ್ತಿದ್ದಾರೆ. ಹಿಂದುತ್ವದ ವಿರೋಧಿ ಎಂದರೆ ಹಿಂದೂ ವಿರೋಧಿಗಳು ಎಂದೇ ಅರ್ಥ. ಹಾಗಾಗಿ ದೇಶದ ಅಭಿವೃದ್ಧಿಯ ಜೊತೆಗೆ ಬಹುಸಂಖ್ಯಾತ ಹಿಂದೂಗಳು ಹಿಂದೂ ಧರ್ಮದ ರಕ್ಷಣೆಯ ಬಗ್ಗೆಯೂ ಹೆಚ್ಚು ಎಚ್ಚರದಿಂದಿರಬೇಕು ಎಂದು ಹೇಳಿದರು.
ಇತ್ತೀಚೆಗೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಮಧ್ವರಾಜ್, 1989ರಲ್ಲಿ ಡೀಕೇಶೀ ಮತ್ತು ನಾನು ಸ್ನೇಹಿತರಾಗಿದ್ದೆವು. ಆಗ ಅವರ ಘೋಷಿತ ಆಸ್ತಿ ಎಷ್ಟಿತ್ತು ಮತ್ತು ಈ ವರ್ಷದ ಚುನಾವಣೆಯಲ್ಲಿ ಅವರ ಆಸ್ತಿ ಎಷ್ಟಾಗಿದೆ ಎನ್ನುವುದನ್ನು ಒಂದು ಸಲ ನೋಡಿದರೆ ಗೊತ್ತಾಗುತ್ತದೆ ಅವರು ಸರ್ಕಾರದ ಹಣವನ್ನು ಎಷ್ಟು ಲೂಟಿ ಮಾಡಿದ್ದಾರೆ ಎನ್ನುವುದು. ಆದುದರಿಂದ ಸರ್ಕಾರವನ್ನೇ ಲೂಟುವುದಕ್ಕಿಂತ ಗಾಳ ಹಾಕಿ ಮೀನು ಹಿಡಿಯುವ ವೃತ್ತಿ ಸರ್ವ ಶ್ರೇಷ್ಟವಾದುದು. ಆದರೆ ನನಗೆ ಬಿಜೆಪಿ ಸೇರಿದ ಮೇಲೆ ಗಾಳ ಹಾಕುವುದಕ್ಕೆ ಪಕ್ಷ ಪುರುಸೊತ್ತು ನೀಡಿಲ್ಲ ಎಂದು ವ್ಯಂಗ್ಯವಾಡಿದರು.











