ಕುಂದಾಪುರ ಮಿರರ್ ಸುದ್ದಿ…

ಗಂಗೊಳ್ಳಿ : ಇಂದಿನ ಈ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡ ಅಪಾರ ಸಂಖ್ಯೆಯ ತಾಯಂದಿರು, ಅಕ್ಕ- ತಂಗಿಯರನ್ನು ಕಂಡಾಗ, ಬಿಜೆಪಿ ಬಗ್ಗೆ ಬೈಂದೂರಿನ ಮಹಿಳೆಯರಿಗೆ ಅಪಾರ ನಂಬಿಕೆಯಿರುವುದು ಖಾತ್ರಿ. ಹಾಗಾಗಿ ಮುಂಬರುವ ಚುನಾವಣೆಯಲ್ಲಿ ಬೈಂದೂರಲ್ಲಿ ಗುರುರಾಜ್ ಗಂಟಿಹೊಳೆ ಅವರ ಗೆಲುವು ನಿಶ್ಚಿತ ಎಂದು ಬಿಜೆಪಿಯ ಸ್ಟಾರ್ ಪ್ರಚಾರಕಿ, ನಟಿ ತಾರಾ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಬಿಜೆಪಿ ಮಹಿಳಾ ಮೋರ್ಚಾ ಬೈಂದೂರು ಮಂಡಲದ ವತಿಯಿಂದ ಹೆಮ್ಮಾಡಿಯ ಜಯಶ್ರೀ ಸಭಾಂಗಣದಲ್ಲಿ ಮಂಗಳವಾರ ನಡೆದ ಬಿಜೆಪಿ ಮಹಿಳಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಬೈಂದೂರಿಗೆ ಹೊಸತನ, ಹೊಸ ಉತ್ಸಾಹ, ಹೊಸ ಚೈತನ್ಯ ಬೇಕಾಗಿದ್ದು, ಅದಕ್ಕಾಗಿ ಬಿಜೆಪಿಯು ಸಾಮಾನ್ಯ ಕಾರ್ಯಕರ್ತನಾಗಿದ್ದ ಗುರುರಾಜ್ ಗಂಟಿಹೊಳೆ ಅವರನ್ನು ಆಯ್ಕೆ ಮಾಡಿದೆ. ಅವರನ್ನು ಗೆಲ್ಲಿಸುವ ಮಹತ್ತರ ಜವಾಬ್ದಾರಿ ನಿಮ್ಮೆಲ್ಲರದು ಎಂದು ಹೇಳಿದರು.
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಜನರನ್ನು ಮರಳು ಮಾಡುವ ಕಾರ್ಡ್ ಆಗಿದ್ದು, ಅದನ್ನು ನಂಬಬೇಡಿ. ಬಿಜೆಪಿ ಕಳೆದ ಅವಧಿಯಲ್ಲಿ ರಾಜ್ಯ ಹಾಗೂ ದೇಶದಲ್ಲಿ ಮಾಡಿರುವ ಅಭಿವೃದ್ಧಿಯ ರಿರ್ಪೊರ್ಟ್ ಕಾರ್ಡನ್ನು ನೋಡಿ ಯಾರು ಉತ್ತಮರು ಎನ್ನುವುದಾಗಿ ಯೋಚಿಸಿ ಎಂದು ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಹೇಳಿದರು.
ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಮಾತನಾಡಿ, ನನಗೆ ಗೊತ್ತಿಲ್ಲದೆ ಕ್ಷೇತ್ರದಲ್ಲಿ ಅನೇಕ ಮಂದಿ ತಾಯಂದಿರು ಬಿಜೆಪಿಯನ್ನು ಗೆಲ್ಲಿಸಲು ಶ್ರಮಿಸುತ್ತಿದ್ದಾರೆ. ಅವರೆಲ್ಲರ ಶ್ರಮವನ್ನು ವ್ಯರ್ಥವಾಗಲು ಬಿಡುವುದಿಲ್ಲ. ಮಹಿಳೆಯರೆಲ್ಲರ ರಕ್ಷಣೆಗೆ ಪ್ರಥಮ ಆದ್ಯತೆ ಎಂದರು.
ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಕಾರ್ಯದರ್ಶಿ ಡಾ.ಗೋವಿಂದ ಬಾಬು ಪೂಜಾರಿ, ಬಿಜೆಪಿ ಬೈಂದೂರು ಮಂಡಲ ಉಸ್ತುವಾರಿ ಕ್ಯಾ. ಬ್ರಿಜೇಶ್ ಚೌಟ, ಬಿಜೆಪಿ ಬೈಂದೂರು ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ, ಬಿಜೆಪಿ ಬೈಂದೂರು ಅಧ್ಯಕ್ಷೆ ಭಾಗೀರಥಿ ಸುರೇಶ್, ಪ್ರಮುಖರಾದ ದೀಪಾ, ಶೋಭಾ ಜಿ.ಪುತ್ರನ್ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ಬೈಂದೂರು ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಮತ್ತು ಅನಿತಾ ಆರ್.ಕೆ. ಕಾರ್ಯಕ್ರಮ ನಿರೂಪಿಸಿದರು.











