ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಬಜರಂಗದಳ ನಿಷೇಧಿಸುವ ಯೋಚನೆಯಾಗಲೀ ಪ್ರಸ್ತಾವನೆಯಾಗಲೀ ಕಾಂಗ್ರೇಸ್ ಪಕ್ಷದ ಮುಂದಿಲ್ಲ ಎಂದು ಮಾಜೀ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಹೇಳಿದರು. ಅವರು ಬುಧವಾರ ಸಂಜೆ ಬೈಂದೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಅಂದಿನ ಕೇಂದ್ರ ಗೃಹ ಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲರು ಆರೆಸ್ಸೆಸ್ಸನ್ನು ಬ್ಯಾನ್ ಮಾಡಿಯೇ ಬಿಟ್ಟಿದ್ದರು. ಆದರೆ ಎರಡು ಮೂರು ದಿನಗಳಲ್ಲಿ ಪ್ರಧಾನಿ ನೆಹರೂರವರು ಆ ಆದೇಶವನ್ನು ಹಿಂಪಡೆಯುವಂತೆ ಪಟೇಲರಿಗೆ ಸೂಚಿಸಿದ್ದಲ್ಲದೇ ಹಿಂಪಡೆದಿದ್ದರು. ದುರಂತವೆಂದರೆ ಆರೆಸ್ಸೆಸ್ ಬ್ಯಾನ್ ಮಾಡಿದವರು ಇಂದು ಅವರದ್ದೇ ದೇವರಾಗಿದ್ದಾರೆ ಮತ್ತು ಕಾಂಗ್ರೆಸ್ ಬಗ್ಗೆ ಬಿಜೆಪಿ ಮತ್ತ ಪರಿವಾರ ಅಪಪ್ರಚಾರ ಮಾಡುತ್ತಿದೆ. ಇದು ಜನಸಾಮಾನ್ಯರಿಗೆ ಗೊತ್ತಿರಬೇಕಾದ ವಿಚಾರ ಎಂದ ಮೊಯಿಲಿ, ಬಿಜೆಪಿ ಬರೀ ಸುಳ್ಳುಗಳನ್ನು ಹೇಳುತ್ತಲೇ ಜನರನ್ನು ನಂಬಿಸುತ್ತಾ ಇದುವರೆಗೂ ಅಧಿಕಾರ ನಡೆಸಿದೆ. ಈ ಬಗ್ಗೆ ರಾಜ್ಯದ ಜನರಿಗೆ ಈಗಾಗಲೇ ಗೊತ್ತಾಗಿದೆ. ಆದರೂ ಸುಳ್ಳಿನ ಕಥೆಗಳನ್ನು ನಂಬಿಸುವಲ್ಲಿ ಬಿಜೆಪಿ ತನ್ನ ಪ್ರಯತ್ನವನ್ನು ಮುಂದುವರೆಸುತ್ತಿದ್ದು, ಪ್ರಜ್ಞಾವಂತ ಮತದಾರರು ಬಿಜೆಪಿ ಮಾತಿಗೆ ದಿಕ್ಕು ತಪ್ಪಬಾರದು ಎಂದರು.
ಕಳೆದ ಬಾರಿ ಪರೇಶ್ ಮೇಸ್ತ ಸಾವಿನ ಪ್ರಕರಣವನ್ನು ಕಾಂಗ್ರೆಸ್ ವಿರುದ್ದ ಎತ್ತಿಕಟ್ಟುವ ಮೂಲಕ ರಾಜಕೀಯ ಲಾಭ ಪಡೆದುಕೊಂಡಿತ್ತು. ಆದರೆ ಬಿಜೆಪಿಯ ಡಬ್ಬಲ್ ಇಂಜಿನ್ ಕೆಲಸ ಮಾಡುತ್ತಿಲ್ಲ ಬದಲಾಗಿ ಬರೀ ಸದ್ದು ಮಾಡುತ್ತಿದೆ ಎನ್ನುವುದು ಜನರಿಗೆ ಗೊತ್ತಾಗಿದೆ. ಸಾಮಾಜಿಕ ನ್ಯಾಯ ಕೊಡುವಲ್ಲಿ ಬಿಜೆಪಿ ವಿಫಲವಾಗಿದೆ. ಭ್ರಷ್ಟಾಚಾರದ ಮೂಲಕ ಬಿಜೆಪಿ ಜನರ ವಿಶ್ವಾಸ ಕಳೆದುಕೊಂಡಿದೆ. ಇದೆಲ್ಲದರ ಪರಿಣಾಮ ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಎದ್ದಿದ್ದು, ಮುಂದಿನ ಸರ್ಕಾರ ನಮ್ಮದೇ ಎಂದರು.
ಬೈಂದೂರು ಕಾಂಗ್ರೆಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಕಾಂಗ್ರೆಸ್ ಮುಖಂಡರಾದ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ರಘುರಾಮ ಶೆಟ್ಟಿ, ಎಸ್.ರಾಜು ಪೂಜಾರಿ, ಮುರುಳಿ ಶೆಟ್ಟಿ, ಕೃಷ್ಣಮೂರ್ತಿ, ನಾಗರಾಜ ಗಾಣಿಗ, ವಡಂಬಳ್ಳಿ ಜಯರಾಮ ಶೆಟ್ಟಿ, ದಿನೇಶ ಪುತ್ರನ್, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ ಉಪಸ್ಥಿತರಿದ್ದರು.











