ಕುಂದಾಪುರ ಮಿರರ್ ಸುದ್ದಿ…
ಗಂಗೊಳ್ಳಿ : ಬೈಂದೂರು ಕ್ಷೇತ್ರದಲ್ಲಿ ಸುಮಾರು 3500 ಕೋಟಿ ರೂ. ಯೋಜನೆ ಅನುಷ್ಠಾನಗೊಂಡಿದ್ದು, ನೀರಾವರಿ, ರಸ್ತೆ, ಆಸ್ಪತ್ರೆ, ಶಾಲಾ ಕಟ್ಟಡಗಳು ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಭಾರತೀಯ ಜನತಾ ಪಕ್ಷದ ರಾಜ್ಯ ಸರಕಾರ ಸಮಾಜಕ್ಕೆ ನೀಡಿದೆ. ಹೀಗಾಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಅಭೂತಪೂರ್ವ ಗೆಲುವು ಸಾಧಿಸಲಿದ್ದಾರೆ ಎಂದು ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಹೇಳಿದರು.
ಹೆಮ್ಮಾಡಿಯಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರು ಬಹಳ ಹುರುಪಿನಿಂದ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಅನೇಕ ಯೋಜನೆಗಳನ್ನು ಚಿಂತನೆ ನಡೆಸಿ ಜನತೆ ಮುಂದಿಟ್ಟಿದೆ. ಪ್ರಣಾಳಿಕೆಯಲ್ಲಿ ಇಲ್ಲದ ಹಲವಾರು ಕಾರ್ಯಕ್ರಮಗಳನ್ನು ರಾಜ್ಯ ಸರಕಾರ ಮಾಡಿದ್ದು, ಮುಂದೆ ಕೂಡ ಜನರ ಬೇಡಿಕೆಗನುಗುಣವಾಗಿ ಮಾಡಲಾಗುವುದು. ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆ ಸಹಿತ ಅನೇಕ ಕಾಯ್ದೆಗಳನ್ನು ರದ್ದು ಮಾಡುವುದಾಗಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ಧರಾಮಯ್ಯ ಹೇಳಿದ್ದಾರೆ. ಕಾಂಗ್ರೆಸ್ ಇತಿಹಾಸವೇ ಅಂತದ್ದು ಎಂದು ಲೇವಡಿ ಮಾಡಿದ ಅವರು, ಅವರು ಅಧಿಕಾರಕ್ಕೆ ಬಂದರೆ ತಾನೆ ಅದನ್ನು ಮಾಡುವುದು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಖಂಡಿತವಾಗಿ ಅಧಿಕಾರಕ್ಕೆ ಬರುವುದಿಲ್ಲ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಇತಿಹಾಸಕ್ಕೆ ಮಾರಕವಾಗಿರುವ ಪಿಎಫ್‍ಐ ಮೇಲಿನ ಸುಮಾರು 1500 ಕೇಸುಗಳನ್ನು ಸಿದ್ಧರಾಮಯ್ಯ ಹಿಂಪಡೆದಿದ್ದಾರೆ. ಕೇವಲ ಶೇ.20ರಷ್ಟಿರುವ ಮುಸ್ಲಿಂ ಸಮುದಾಯದ ಅಭಿವೃದ್ಧಿಗಾಗಿ ಯೋಜನೆ ರೂಪಿಸುವ ಬದಲು, ಅವರ ಓಟಿಗಾಗಿ ಸಮಾಜಕ್ಕೆ ಹಾನಿಯಾಗುತ್ತಿರುವ ಭಯೋತ್ಪಾದನೆ, ಕೊಲೆ, ಸುಲಿಗೆ, ಕುಕ್ಕರ್ ಬ್ಲಾಸ್ಟ್ ಪ್ರಕರಣ, ಕೆಜೆ ಹಳ್ಳಿ ಡಿಜೆ ಹಳ್ಳಿ ಘಟನೆಯ ಆರೋಪಿಗಳು ನಿರಪರಾಧಿಗಳು, ಅಮಾಯಕರು ಎಂದು ಹೇಳಿಕೆ ನೀಡಿ ಅವರ ಬೆಂಬಲಕ್ಕೆ ನಿಲ್ಲುತ್ತಿರುವ ಕಾಂಗ್ರೆಸ್‍ಗೆ ಈ ಬಾರಿ ರಾಜ್ಯದ ಮತದಾರರು, ಮಹಿಳೆಯರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಬಜರಂಗ ದಳವನ್ನು ಬ್ಯಾನ್ ಮಾಡುವುದಾಗಿ ಹೇಳಿರುವುದನ್ನು ಖಂಡಿಸಿದ ಅವರು, ಈ ವಿಚಾರದಲ್ಲಿ ಮಹಿಳೆಯರು ಎದ್ದು ನಿಂತು ತಕ್ಕ ಪ್ರತ್ಯುತ್ತರ ನೀಡಲಿದ್ದಾರೆ. ಚುನಾವಣಾ ಪ್ರಚಾರಕ್ಕೆ ಶಾಸಕ ಸುಕುಮಾರ್ ಶೆಟ್ಟಿ ಬಾರದಿರುವುದಕ್ಕೆ ಪ್ರತಿಕ್ರಿಯಿಸಿದ ಅವರು ಸುಕುಮಾರ್ ಶೆಟ್ಟಿ ಅವರು ಪ್ರಚಾರಕ್ಕೆ ಬಂದು ಗುರುರಾಜ್ ಗಂಟಿಹೊಳೆ ಅವರ ಗೆಲುವಿಗೆ ಶ್ರಮಿಸಲಿದ್ದಾರೆ ಎಂದರು.
ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜರಂಗದಳ ಬ್ಯಾನ್ ಮಾಡುವುದಾಗಿ ಹೇಳಿರುವುದು ಅವರಿಗೆ ತಿರುಗುಬಾಣವಾಗಲಿದೆ. ಬಜರಂಗ ದಳದ ಒಬ್ಬನೇ ಒಬ್ಬ ಕಾರ್ಯಕರ್ತನ ಮೈ ಮುಟ್ಟಲು ಅವರಿಗೆ ಸಾಧ್ಯವಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರುದಿಲ್ಲ. ಕಾಂಗ್ರೆಸ್‍ನ ಹಿಂದು ದಮನ ನೀತಿಯ ವಿರುದ್ಧ ಸಮಸ್ತ ಹಿಂದು ಸಮಾಜದ ಒಗ್ಗಟ್ಟಾಗಿ ಎದುರಿಸಲಿದ್ದು, ಬಜರಂಗ ದಳ ಬ್ಯಾನ್ ಬಗ್ಗೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದರು.
ಬೈಂದೂರು ಮಂಡಲ ಬಿಜೆಪಿ ಉಸ್ತುವಾರಿ ಕ್ಯಾ.ಬ್ರಿಜೇಶ್ ಚೌಟ, ಬೈಂದೂರು ಮಂಡಲ ಅಧ್ಯಕ್ಷ ದೀಪಕ ಕುಮಾರ್ ಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಬೈಂದೂರು ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾಗೀರಥಿ ಸುರೇಶ, ಅನಿತಾ ಆರ್.ಕೆ. ಉಪಸ್ಥಿತರಿದ್ದರು.











