ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ರಾಜ್ಯ ರಾಜಕಾರಣದಲ್ಲಿ ಬಿಜೆಪಿ ತನ್ನ ಪ್ರಯೋಗ ಶಾಲೆಯನ್ನಾಗಿ ಮಾಡಿಮಾಡಿಕೊಂಡಿರುವ ಕರಾವಳಿಯಲ್ಲಿ ಬಿಜೆಪಿ ಎಂದಿನಂತೆ ಗೆಲುವಿನ ನಗೆ ಬೀರಿದೆ. ಉಡುಪಿ ಜಿಲ್ಲೆಯ ಗಡಿ ಭಾಗವಾದ ಬೈಂದೂರು ವಿಧಾನಸಭಾ ಕ್ಷೇತ್ರವಾದ ಬೈಂದೂರಿನಲ್ಲಿ ಬರಿಗಾಲ ಸಂತ ಗುರುರಾಜ ಗಂಟಿಹೊಳೆಯನ್ನು ಮತದಾರರು ವಿಧಾನಸೌಧದ ಮೆಟ್ಟಿಲು ಹತ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ.
೧,೮೩,೪೮೦ ಮತಗಳು ಚಲಾವಣೆಯಾಗಿದ್ದು, ಕೊನೆಯ ಸುತ್ತಿನಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಆರೆಸ್ಸೆಸ್ ಕಾರ್ಯಕರ್ತ ಗುರುರಾಜ ಗಂಟಿಹೊಳೆ ಅವರು ೯೭೪೪೭ ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ. ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಮಾಜೀ ಶಾಸಕ ಕೆ. ಗೋಪಾಲ ಪೂಜಾರಿಯವರು ೮೧೫೧೮ ಮತಗಳನ್ನು ಪಡೆದಿದ್ದು, ಗುರುರಾಜ್ ಗಂಟಿಹೊಳೆಯವರು ೧೫೯೨೯ ಮತಗಳ ಅಂತರದಲ್ಲಿ ಸೋಲಿಸಿದ್ದಾರೆ.
ಜೆಡಿಎಸ್‌ನ ಮನ್ಸೂರ್ ಇಬ್ರಾಹಿಂ ೮೨೭ ಮತಗಳು, ಆಮ್ ಆದ್ಮಿ ಪಾರ್ಟಿಯ ಸಿ.ಎ. ರಮಾನಂದ ಪ್ರಭು ೧೮೪ ಮತಗಳು, ಉತ್ತಮ ಪ್ರಜಾಕೀಯ ಪಕ್ಷದ ಪ್ರಸಾದ್ ಎಸ್. ೬೨೦ ಮತಗಳು, ರಾಷ್ಟಿçÃಯ ಸಮಾಜ ದಳ(ಆರ್)ದ ಕೊಲ್ಲೂರು ಮಂಜುನಾಥ ನಾಯ್ಕ್ ೧೬೩ ಮತಗಳು, ಪಕ್ಷೇತರ ಅಭ್ಯರ್ಥಿಗಳಾದ ಚಂದ್ರಶೇಖರ ಜಿ. ೫೯೭ ಮತಗಳು, ಶ್ಯಾಮ್ ಬಿ. ೨೯೨ ಮತಗಳು, ಹೆಚ್. ಸುರೇಶ್ ಪೂಜಾರಿ ೬೩೩ ಮತಗಳು ಹಾಗೂ ನೋಟಾಕ್ಕೆ ೧೧೯೯ ಮತಗಳು ಚಲಾವಣೆಯಾಗಿವೆ.
ಬೈಂದೂರು ವಿಧಾನಸಭಾ ಕ್ಷೇತ್ರದ ಚುನಾವಣೆ ಆರಂಭದಿಂದಲೂ ಗೊಂದಲದ ಗೂಡಾಗಿತ್ತು. ಕೊನೇ ಗಳಿಗೆಯಲ್ಲಿ ಹಾಲೀ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿಯವರನ್ನು ಕೈಬಿಟ್ಟು ಸಂಘ ಪರಿವಾರದ ಗುರುರಾಜ ಗಂಟಿಹೊಳೆಯವರನ್ನು ಆಯ್ಕೆ ಮಾಡಲಾಗಿತ್ತು. ಇದರಿಂದ ಸ್ವಾಭಾವಿಕವಾಗಿಯೇ ಶಾಸಕ ಸುಕುಮಾರ ಶೆಟ್ಟಿ ಅಸಮಾಧಾನಗೊಂಡಿದ್ದರು. ಇನ್ನೊಂದು ಕಡೆ ಪ್ರಬಲ ಆಕಾಂಕ್ಷಿಯಾಗಿದ್ದ ಬಾಬು ಶೆಟ್ಟಿ, ಅವರ ಜೊತೆಗಾರರಾದ ಶಂಕರ ಪೂಜಾರಿ, ಸದಾಶಿವ ಪಡುವರಿ ಬಂಡಾಯವೆದ್ದು ಕಾಂಗ್ರೆಸ್ ಸೇರಿದ್ದರು. ಇದರಿಂದ ಬೈಂದೂರಿನಲ್ಲಿ ಕಾಂಗ್ರೆಸ್ ಗೆಲ್ಲಬಹುದು ಎನ್ನುವ ಲೆಕ್ಕಾಚಾರ ಕ್ಷೇತ್ರಾದ್ಯಂತ ಹರಿದಾಡುತ್ತಿತ್ತು. ಇತ್ತ ಬಿಜೆಪಿ ಪ್ರಬಲ ನಾಯಕರಿಲ್ಲದೇ ಗುರುರಾಜ್ ಹೊಸ ಅಭ್ಯರ್ಥಿಯಾಗಿದ್ದರೂ ಬೈಂದೂರು ಮಂಡಲದ ಮಾಜೀ ಅಧ್ಯಕ್ಷರಾಗಿದ್ದ ಬಿ.ಎಸ್.ಸುರೇಶ್ ಶೆಟ್ಟಿ, ಮಹಿಳಾ ಮೋರ್ಛಾದ ಪ್ರಿಯದರ್ಶಿನಿ ಬಿಜೂರು ಮೊದಲಾದವರ ಸಾರಥ್ಯದಲ್ಲಿ ಕೊನೆಗೂ ಯಶಸ್ಸು ಕಂಡಿದ್ದಾರೆ.











