ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಉಡುಪಿ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಮಂಡಲಗಳ ನೂತನ ಅಧ್ಯಕ್ಷರ ಆಯ್ಕೆ ನಡೆದಿದ್ದು, ಕುಂದಾಪುರ ಮಂಡಲದ ಅಧ್ಯಕ್ಷರಾಗಿ ಬೀಜಾಡಿ ಸುರೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಕಿಶೋರ್ ಕುಮಾರ್ ಕುಂದಾಪುರ ಅವರು ಆಯ್ಕೆ ಪಟ್ಟಿಯನ್ನು ಅಂತಿಮಗೊಳಿಸಿ ಆದೇಶ ನೀಡಿದ್ದು, ಬೈಂದೂರು ಮಂಡಲ ಅಧ್ಯಕ್ಷರಾಗಿ ಹಿಂದಿನ ಅವಧಿಯ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿಯವರನ್ನೇ ಮುಂದುವರೆಸಲಾಗಿದೆ. ಉಡುಪಿ ಗ್ರಾಮಾಂತರ ರಾಜೀವ ಕುಲಾಲ್, ಉಡುಪಿ ನಗರ ದಿನೇಶ್ ಅಮೀನ್, ಜಿತೇಂದ್ರ ಶೆಟ್ಟಿ ಕಾಪು ಹಾಗೂ ನವೀನ್ ನಾಯಕ್ ಕಾರ್ಕಳ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಕೆಲವು ದಶಕಗಳಿಂದ ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದ ಬೀಜಾಡಿ ಸುರೇಶ್ ಶೆಟ್ಟಿ ಕುಂದಾಪುರ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಪತ್ನಿ ಶ್ರೀಲತಾ ಶೆಟ್ಟಿ ಹಿಂದಿನ ಅವಧಿಯಲ್ಲಿ ಕೋಟೇಶ್ವರ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದರು. ಸುರೇಶ್ ಶೆಟ್ಟಿ ಆಯ್ಕೆಗೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಸ್ವಾಗತಿಸಿದ್ದಾರೆ.










