ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಬಿಜೆಪಿ ಸುಳ್ಳು ಹೇಳಿಕೊಂಡೇ ಬಂದಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಜಕಾರಣದೊಳಗೆ ಪ್ರವೇಶ ಮಾಡಿದೆ. ಪ್ರದಾನಿ ನರೇಂದ್ರ ಮೋದಿ ಅವರನ್ನು ಹೊರತುಪಡಿಸಿದರೆ ಪ್ರಾಮಾಣಿಕರನ್ನು ಹುಡುಕಿತಗೆಯಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ. ಬಿಜೆಪಿ ನಕಲಿ ಹಿಂದೂತ್ವ ಪ್ರತಿಪಾದಿಸುತ್ತಾ ಕಾಂಗ್ರೆಸ್‍ಕ್ಕಿಂತ ಮಿಗಿಲಾಗಿ ಜಾತ್ಯತೀತೆ ಮುಖವಾಡ ಧರಿಸಿ ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟಿದೆ. ಈ ಹಿನ್ನೆಲೆಯಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಮುಂಬರುವ ವಿಧಾನಸಭಾ ಚುನಾವಣೆಯನ್ನು ಎದುರಿಸಲಿದ್ದು, ರಾಜ್ಯದ 224 ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಮಾಡಲಿದೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಹೇಳಿದರು.
ಅವರು ಕುಂದಾಪುರದ ಕಛೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು. ಸಂಘ ಪರಿವಾರ ಹೊರತು ಪಡಿಸಿ ಎಲ್ಲಾ ಹಿಂದೂ ಸಂಘಟನೆಯನ್ನು ಸಂಪರ್ಕಿಸಿ, ಹಿಂದೂ ಸಮಾಜದ ರಕ್ಷಣೆಯ ವಿಚಾರದಲ್ಲಿ ಒಮ್ಮತದ ತೀರ್ಮಾನ ತಗೆದುಕೊಳ್ಳಲಿದ್ದಾರೆ ಎಂದರು.
ಮಕ್ಕಳಿಗೆ ಯಾವ ರೀತಿ ಶಿಕ್ಷಣವನ್ನು ನೀಡಬೇಕು ಎಂದು ಎಡ ಪಂಥೀಯ ಹಾಗೂ ಸ್ವಯಂಘೋಷಿತ ಬುದ್ಧಿಜೀವಿಗಳ ನಿರ್ಧಾರವನ್ನು ಹಿಂದೂ ಮಹಾಸಭಾ ಖಂಡಿಸುತ್ತದೆ. ಇಷ್ಟು ವರ್ಷಗಳಿಂದ ಸುಳ್ಳು ಇತಿಹಾಸವನ್ನು ಬೋಧಿಸಿ ಮಕ್ಕಳಿಗೆ ನಮ್ಮ ದೇಶವನ್ನಾಳಿದ ವೀರ ಸ್ಪದೇಶಿ ಹಿಂದೂ ರಾಜರುಗಳ, ಹಾಗೂ ಅನೇಕ ಮಹನೀಯರ ಜೀವನ ಮೌಲ್ಯಗಳು ಹಾಗೂ ಭಾರತೀಯ ಸಂಸ್ಕøತಿಯನ್ನು ವಂಚಿತರನ್ನಾಗಿ ಮಾಡಿದ್ದು, ಇನ್ನಾದರೂ ದೇಶವನ್ನು ಲೂಟಿ ಮಾಡಿದ ವಿದೇಶಿ ಹಾಗೂ ಸ್ವದೇಶಿ ಆಕ್ರಮಣಕಾರರುಗಳ ಹಾಗೂ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಗಳ ಬಗ್ಗೆ ಸತ್ಯವನ್ನು ತಿಳಿಸಿಕೊಡಬೇಕು ಎಂದು ಅವರು ಆಗ್ರಹಿಸಿದರು.
ಕೇವಲ ಪಠ್ಯ ಪುಸ್ತಕಗಳನ್ನು ಬದಲಾಯಿಸಿದರೆ ಸಾಲದು, ಇವತ್ತಿನ ಕಾಲಘಟ್ಟದಲ್ಲಿ ಶಿಕ್ಷಣ ಮಕ್ಕಳಿಗೆ ಹಾಗೂ ಪೋಷಕರಿಗೆ ಅಘೋಷಿತ ಶಿಕ್ಷೆಯಾಗಿದೆ. ಮಕ್ಕಳಿಗಿಂತ ಭಾರವಾದ ಪುಸ್ತಕಗಳು ಹಾಗೂ ಇತರ ವಿಷಯಗಳಿಂದ ಶಿಕ್ಷಣದ ಹೆಸರಿನ ಮೇಲೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಶಿಕ್ಷಣವನ್ನು ವ್ಯಾಪಾರಿಕರಣಗೊಳಿಸಿ ರಾಜಕಾರಣಿಗಳು ಹಾಗೂ ಬಂಡವಾಳಶಾಹಿಗಳು ಪೋಷಕರನ್ನು ಹಗಲು ದರೋಡೆ ಮಾಡುತ್ತಿವೆ. ಇದಕ್ಕೆ ಸರ್ಕಾರವು ಹಿಂಬಾಲಿನಿಂದ ಬೆಂಬಲ ನೀಡುತ್ತದೆ. ಇದು ಬದಲಾಗಬೇಕು. ಎಸ್.ಎಸ್.ಎಲ್.ಸಿ ತನಕ ಉಚಿತ ಶಿಕ್ಷಣ ನೀಡಬೇಕು. ಅದು ಸರ್ಕಾರದ ಹಿಡಿತದಲ್ಲಿಯೇ ಇರಬೇಕು. ಹಾಗೆಯೇ ಆರೋಗ್ಯ ಕ್ಷೇತ್ರವನ್ನು ಸರ್ಕಾರ ಗಟ್ಟಿಗೊಳಿಸಬೇಕು ಎಂದರು.
ಉಡುಪಿ ಜಿಲ್ಲಾ ಅಧ್ಯಕ್ಷರಾದ ರಾಮಕೃಷ್ಣ ಶೆಟ್ಟಿ ಮಾತನಾಡಿ, ಅಖಿಲ ಭಾರತ ಹಿಂದೂ ಮಹಾಸಭಾ ಹೊಂದಾಣಿಕೆ ರಾಜಕೀಯ ಮಾಡುವುದಿಲ್ಲ. ಸಮಸ್ತ ಹಿಂದೂಗಳ ರಕ್ಷಣೆ ನಮ್ಮ ಉದ್ದೇಶ. ಮತಗಳಿಗೋಷ್ಕರ ಒಲೈಕೆ ರಾಜಕಾರಣ ಮಾಡುವುದಿಲ್ಲ. ಗ್ರಾಮ ಸಭೆ, ತಾ.ಪಂ., ಜಿ.ಪಂ. ವಿಧಾನಸಭಾ ಚುನಾವಣೆಗಳಲ್ಲಿ ನಮ್ಮ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಯುವ ಸಭಾ ಜಿಲ್ಲಾಧ್ಯಕ್ಷರಾದ ಪ್ರತಾಪ್ ಸಾಕೂರು, ದ.ಕ ಜಿಲ್ಲಾಧ್ಯಕ್ಷರಾದ ಪ್ರಮೋದ್ ಉಚ್ಚಿಲ್, ಧಾರ್ಮಿಕ ಸಭಾದ ರಾಘವೇಂದ್ರ ಉಳ್ಳೂರ, ದೇವಿಕಾ ಭಟ್, ದೀಪಾ ಕಿಣಿ, ಸಾಮಾಜಿಕ ಜಾಲತಾಣದ ಮುಖ್ಯಸ್ಥ ಶೈಲೇಶ್ ಉಪಸ್ಥಿತರಿದ್ದರು.











